ಬೆಂಗಳೂರು ಗ್ರಾಮಾಂತರ : ಲೋಕಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದರ ಜತೆಗೆ ಬರದಿಂದ ಬಿಸಿಲ ಕಾವು ಕೂಡ ಏರುತ್ತಲೇ ಇದೆ. ಬಿಸಿಲ ಬೇಗೆ ಜನರ ಜತೆಗೆ ಪ್ರಾಣಿ-ಪಕ್ಷಿಗಳು ಕೂಡ ತತ್ತರಿಸುತ್ತಿವೆ ಎಂದು ಮಾಹಿತಿ ತಿಳಿದು ಬಂದಿದೆ.
ಜಿಲ್ಲೆಯಾದ್ಯಂತ ತಾಪಮಾನ ಕೂಡ 38 ಡಿಗ್ರಿ ದಾಟುತ್ತಿದ್ದು, ಕೆರೆಕಟ್ಟೆ, ಅಂತರ್ಜಲ ಇಳಿಕೆ ಕಂಡಿದ್ದು, ಬರದ ನಿರ್ವಹಣೆ ತಾಲೂಕು ಮಟ್ಟದಲ್ಲಿಟಾಸ್ಕ್‌ಫೋರ್ಸ್ ರಚಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಬರದ ನಡುವೆ ನೀರು, ಮೇವು ಕೊರತೆ ಕಾಡುವ ಭೀತಿ ಇದ್ದು, ಅದಕ್ಕೆ ಅಗತ್ಯ ಕ್ರಮವನ್ನು ಜಿಲ್ಲಾಡಳಿತ ವಹಿಸುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರ ನಡುವೆ ಕೂಡ ಕುಡಿಯುವ ನೀರು, ಬಳಕೆಯ ನೀರಿನ ಸಮಸ್ಯೆ ಬಗ್ಗೆ ಹಲವೆಡೆ ಕೇಳಿ ಬರುತ್ತಿದ್ದು, ಬೇಸಿಗೆ ಮಳೆ ಕೂಡ ಕೈಕೊಟ್ಟಿದ್ದು, ಪೂರ್ವ ಮುಂಗಾರು ಮಳೆಯ ನಿರೀಕ್ಷೆಯಲ್ಲಿಜನರಿದ್ದಾರೆ.
ಬಯಲುಸೀಮೆ ಜಿಲ್ಲೆಯಾದ ಬೆಂಗಳೂರು ಗ್ರಾಮಾಂತರದಲ್ಲಿ 70 0ಕ್ಕೂ ಹೆಚ್ಚು ನಾನಾ ಇಲಾಖೆಗಳ ಕೆರೆಗಳಿವೆ. ಜಿಲ್ಲೆಯ ಜಲಮೂಲಗಳೇ ಕೆರೆಗಳಾಗಿವೆ. 2022ರ ಮಳೆ ದಶಕಗಳಿಂದಲೂ ಬರಿದಾಗಿದ್ದ ಕೆರೆಗಳಿಗೂ ಹೊಸ ಕಳೆ ತಂದಿತ್ತು. ಆದರೆ 2023 ರಲ್ಲಿ ಮಳೆ ಸಂಪೂರ್ಣ ಕೈಕೊಟ್ಟ ಹಿನ್ನೆಲೆ ಕೆರೆಗಳಿಗೆ ನೀರು ಹರಿದು ಬಂದಿಲ್ಲ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2023 ರಲ್ಲಿ ಮಳೆ ಕೊರತೆಯಾಗಿ ಬೆಳೆಗಳಿಗೆ ಹಾನಿ ಉಂಟಾದ ಹಿನ್ನೆಲೆ ಜಿಲ್ಲೆಯ 4 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಸರಕಾರ ಘೋಷಿಸಿತ್ತು. ಈ ಬರದ ಎಫೆಕ್ಟ್ ತಿಂಗಳಿಂದ ತಿಂಗಳಿಗೆ ಉಲ್ಬಣವಾಗುತ್ತಿದೆ. ಸದ್ಯ ಜಿಲ್ಲೆಯ ಶೇ.80 ರಷ್ಟು ಕೆರೆಗಳಲ್ಲಿ ನೀರು ತಳಸೇರಿದೆ.