ಬಾಗಲಕೋಟೆ
ಜಿಲ್ಲೆಯಲ್ಲಿ ಸೆಪ್ಟೆಂಬರ ೩ ರಂದು ಶಿಕ್ಷಕರ ಅರ್ಹತಾ ಪರೀಕ್ಷೆ-೨೦೨೩ ನಡೆಯಲಿದ್ದು, ಪರೀಕ್ಷೆಗೆ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಶಿಕ್ಷಕರ ಅರ್ಹತಾ ಪರೀಕ್ಷೆ-೨೦೨೩ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನವನಗರ, ವಿದ್ಯಾಗಿರಿ ಮತ್ತು ಹಳೇ ಬಾಗಲಕೋಟೆ ಸೇರಿ ಒಟ್ಟು ೨೮ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಒಟ್ಟು ಎರಡು ಅವಧಿಯಲ್ಲಿ ಪರೀಕ್ಷೆಗಳು ನಡೆಯಲಿದ್ದು, ಮೊದಲನೇ ಅವಧಿಯಲ್ಲಿ ೫೪೦೯, ಎರಡನೇ ಅವಧಿಯಲ್ಲಿ ೭೦೪೫ ಅಭ್ಯರ್ಥಿಗಳು ಸೇರಿ ಒಟ್ಟು ೭೧೮೦ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆಂದು ತಿಳಿಸಿದರು.
ಪರೀಕ್ಷಾ ಕಾರ್ಯಕ್ಕೆ ಓರ್ವ ನೋಡಲ್ ಅಧಿಕಾರಿ, ೯ ಜನ ಮಾರ್ಗಾಧಿಕಾರಿಗಳು, ೨೮ ಮುಖ್ಯ ಅಧೀಕ್ಷಕರು, ಪರೀಕ್ಷಾ ಕೇಂದ್ರದ ವೀಕ್ಷಕರು ಹಾಗೂ ಪ್ರತಿ ಕೊಠಡಿಗೆ ಒಬ್ಬರಂತೆ ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ೧೦ ಕೊಠಡಿಗೆ ಒಬ್ಬರಂತೆ ರಿಲಿವರಗಳನ್ನು ಸಹ ನೇಮಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಓರ್ವ ದೈಹಿಕ ಶಿಕ್ಷಕರನ್ನು ಮೊಬೈಲ್ ಸ್ವಾಧೀನಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಭದ್ರತೆ ವ್ಯವಸ್ಥೆಗಾಗಿ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು ಪೊಲೀಸ್ ಇಲಾಖೆಗೆ ಸೂಚಿಸಿದರು.
ಪರೀಕ್ಷೆಯು ಯಾವುದೇ ರೀತಿಯ ಲೋಪವಾಗದಂತೆ ಪಾರದರ್ಶಕವಾಗಿ ನಡೆಸಬೇಕು. ಪರೀಕ್ಷಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಗಳು ಪರೀಕ್ಷಾ ಮಾರ್ಗದರ್ಶನಗಳನ್ನು ಕಡ್ಡಾಯವಾಗಿ ತಪ್ಪದೇ ಪಾಲಿಸಬೇಕು. ಮಾರ್ಗಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ಕಾರ್ಯವಾಗಬೇಕು. ಪ್ರತಿ ಅಧಿವೇಶನಕ್ಕಾಗಿ ಪ್ರತ್ಯೇಕವಾಗಿ ವಿಡಿಯೋ ಚಿತ್ರೀಕರಣ ಮಾಡಿಸಬೇಕು. ಪರೀಕ್ಷಾ ಕಾರ್ಯದಲ್ಲಿ ಕಾಳಜಿಯಿಂದ, ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಮೊದಲನೇ ಅವಧಿಯಲ್ಲಿ ಬೆಳಿಗ್ಗೆ ೯.೩೦ ಗಂಟೆಗೆ ಹಾಗೂ ಎರಡನೇ ಅವಧಿಯಲ್ಲಿ ಮಧ್ಯಾಹ್ನ ೨ ಗಂಟೆಗೆ ಪರೀಕ್ಷೇಗಳ ಪ್ರಾರಂಭವಾಗಲಿದ್ದು, ಪರೀಕ್ಷೆ ನಡೆಯುವ ೧ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದ ಆವರಣದಲ್ಲಿ ಹಾಜರಾಗಬೇಕು. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್, ಕೈಗಡಿಯಾರ, ಕ್ಯಾಲ್ಕುಲೇಟರ್ ಸೇರಿದಂತೆ ಇತರೆ ಎಲೆಕ್ಟಾçನಿಕ್ಸ್ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ವಿಕಲಚೇತನ ಅಭ್ಯರ್ಥಿಗಳಿಗೆ ಅಂಗವಿಕಲತೆ ಪ್ರಮಾಣವನ್ನು ಆಧರಿಸಿ ಪರೀಕ್ಷೆ ಬರೆಯಲು ಪ್ರತಿ ಗಂಟೆಗೆ ೨೦ ನಿಮಿಷ ಹೆಚ್ಚುವರಿ ಕಾಲಾವಕಾಶ ಕಲ್ಪಿಸಿದೆ ಎಂದರು.
ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಪಡೆಯುವುದು ಸ್ಥಾನಿಕ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲು ೨೦೦ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುತ್ತದೆ. ಈ ವ್ಯಾಪ್ತಿಯಲ್ಲಿ ಝರಾಕ್ಸ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚತಕ್ಕದ್ದೆಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಬಿ.ಕೆ.ನಂದನೂರ, ಶಿಕ್ಷಣಾಧಿಕಾರಿ ಎಚ್.ಜಿ.ಮಿರ್ಜಿ ಸೇರಿದಂತೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಹಾಗೂ ಜಾಗೃತಿ ದಳದ ಅಧಿಕಾರಿಗಳು ಉಪಸ್ಥಿತರಿದ್ದರು.