ಜಮಖಂಡಿ ವಿಧಾನಸಭಾ ಮತಕ್ಷೇತ್ರ
ನಿಮ್ಮ ಸುದ್ದಿ ಬಾಗಲಕೋಟೆ
ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಹಿನ್ನಲೆಯಲ್ಲಿ ಜಮಖಂಡಿ ಮತಕ್ಷೇತ್ರದಲ್ಲಿ ನೀತಿ ಸಂಹಿತೆ ಪಾಲನೆಗೆ ವಿವಿಧ ತಂಡ ಹಾಗೂ ಮೂರು ಕಡೆಗಳಲ್ಲಿ ಚೆಕ್‍ಪೋಸ್ಟಗಳನ್ನು ಸ್ಥಾಪಿಸಲಾಗಿದೆ ಎಂದು ಜಮಖಂಡಿ ಮತಕ್ಷೇತ್ರದ ಚುನಾವಣಾಧಿಕಾರಿ ಸಂತೋಷ ಕಾಮಗೌಡ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ನೀತಿ ಸಂಹಿತೆ ಪಾಲನೆಗೆ 20 ಸೆಕ್ಟರ ಅಧಿಕಾರಿಗಳು, ಓರ್ವ ಸಹಾಯಕ ವೆಚ್ಚ ವೀಕ್ಷಕರು, 3 ವಿಡಿಯೋ ಕಣ್ಗಾವಲು ತಂಡ, 1 ವಿಡಿಯೋ ವೀಕ್ಷಣಾ ತಂಡ, 6 ಕ್ಷಿಪ್ರ ಸಂಚಾರಿ ತಂಡ, 9 ಸ್ಥಾಯಿ ಕಣ್ಗಾವಲು ತಂಡ ರಚಿಸಲಾಗಿದೆ. ಅಲ್ಲದೇ ಹುಲ್ಯಾಳ ಕ್ರಾಸ್, ಚಿಕ್ಕಲಕಿ ಮತ್ತು ಹುನ್ನೂರನಲ್ಲಿ ಚೆಕ್‍ಪೋಸ್ಟಗಳನ್ನು ರಚಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಸಹ ಸಿ-ವಿಜಿಲ್ ಮೊಬೈಲ್ ಆಪ್ ಮೂಲಕ ದೂರು ಸಲ್ಲಿಸಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.
ಜಮಖಂಡಿ ಮತಕ್ಷೇತ್ರದಲ್ಲಿ ಒಟ್ಟು 208419 ಮತದಾರರಿದ್ದು, ಅದರಲ್ಲಿ 104149 ಪುರುಷ ಮತದಾರರು, 104265 ಮಹಿಳಾ ಮತದಾರರು ಇದ್ದಾರೆ. ಸೇವಾ ಮತದಾರರು 549 ಇದ್ದು, ಅದರಲ್ಲಿ 536 ಪುರುಷ, 13 ಮಹಿಳಾ ಮತದಾರರಿದ್ದಾರೆ. ಮತಕ್ಷೇತ್ರದಲ್ಲಿ 232 ಮತಗಟ್ಟೆಗಳು ಇದ್ದು, ಅದರಲ್ಲಿ ನಗರ ಪ್ರದೇಶದಲ್ಲಿ 61, ಗ್ರಾಮೀಣ ಪ್ರದೇಶದಲ್ಲಿ 171 ಮತಗಟ್ಟೆಗಳಿವೆ. 7 ವಲ್ನೇಬರ್, 63 ಕ್ರಿಟಿಕಲ್ ಹಾಗೂ 162 ಸಾಮಾನ್ಯ ಮತಗಟ್ಟೆಗಳಿವೆ. ಚುನಾವಣಾ ಕಾರ್ಯಕ್ಕೆ ಪ್ರತಿ ಮತಗಟ್ಟೆಗೆ 4 ಮತಗಟ್ಟೆ ಅಧಿಕಾರಿಗಳನ್ನು ಒಳಗೊಂಡಂತೆ ಒಟ್ಟು 232 ಮತಗಟ್ಟೆಗಳಿಗೆ ಹಾಗೂ ಶೇಕಡಾ 10 ರಷ್ಟು ಹೆಚ್ಚುವರಿ ಸಿಬ್ಬಂದಿಗಳು ಸೇರಿ 1021 ಸಿಬ್ಬಂದಿಗಳು ಅವಶ್ಯಕತೆ ಇರುವುದಾಗಿ ತಿಳಿಸಿದ್ದಾರೆ.
ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರಗಳನ್ನು ಎನ್‍ಕೋರ್ ವೆಬ್‍ಸೈಟ್ ಮೂಲಕ ಸಲ್ಲಿಸಬಹುದಾಗಿದೆ. ಸಭೆ, ರ್ಯಾಲಿ, ವಾಹನಗಳಿಗೆ ತಾತ್ಕಾಲಿಕ ಪಕ್ಷದ ಕಚೇರಿಗೆ, ಧ್ವನಿವರ್ದಕಗಳಿಗೆ ಹಾಗೂ ಹೆಲಕ್ಟಾಪ್ಟರ ಹಾಗೂ ಹೆಲಿಪ್ಯಾಡ್ ಪರವಾನಿಗೆ ಸುವಿದಾ ವೆಬ್‍ಸೈಟ್‍ನಲ್ಲಿ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷದವರು ಪರವಾನಿಗೆ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ. ಜಮಖಂಡಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ದೂರು ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ದೂಸಂ.08353-220023ಗೆ ಸಂಪರ್ಕಿಸಿ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಎಂದರು ತಿಳಿಸಿದ್ದಾರೆ.
*ಹಿರಿಯರಿಗೆ ಮತದಾನದ ಸೌಲಭ್ಯ*
—————————
ಚುನಾವಣಾ ಆಯೋಗವು ಈ ಬಾರಿ ಹಿರಿಯ ನಾಗರಿಕರು, ವಿಕಲಚೇತನರು, ಅಗತ್ಯ ಸೇವೆಗಳ ಮೇಲಿರುವ ಗೈರು ಹಾಜರಿ ಮತದಾರರು, ಕೋವಿಡ್ ಸೋಂಕಿತ ಗೈರು ಮತದಾರಿಗೆ ಅಂಚೆ ಮತಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತಕ್ಷೇತ್ರದಲ್ಲಿ 80 ರಿಂದ 89 ವರ್ಷದ 3964, 90 ರಿಂದ 99 ವರ್ಷದ 658, 100 ವರ್ಷ ಮೆಲ್ಪಟ್ಟ 38 ಮತದಾರರಿದ್ದಾರೆ. ವಿಕಲಚೇತನರು 3840 ಮತದಾರರಿದ್ದಾರೆ. ಅದರಲ್ಲಿ 2242 ಪುರುಷ, 1598 ಮಹಿಳಾ ವಿಕಚೇತನರಿದ್ದಾರೆ.
*ಬೇರೆ ಜಿಲ್ಲೆಗೆ 9 ಜನರ ಗಡುಪಾರು*
—————————-
ಜಮಖಂಡಿ ಉಪ ವಿಭಾಗಕ್ಕೆ ಸಂಬಂಧಿಸಿದಂತೆ 2022-23ನೇ ಸಾಲಿನಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ 1963 ಕಲಂ 55 ಮತ್ತು 56(ಜಿ) ರಡಿ 9 ಜನರನ್ನು ಬೇರೆ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಜಮಖಂಡಿ ಶಹರದ 3 ಜನರನ್ನು ಚಾಮರಾಜನಗರ, ಬಳ್ಳಾರಿ ಜಿಲ್ಲೆಯ ಸಂಡೂರ, ರಾಯಚೂರು ಜಿಲ್ಲೆಯ ಮಾನ್ವಿ, ಬನಹಟ್ಟಿಯ ಓರ್ವ ವ್ಯಕ್ತಿಯನ್ನು ರಾಯಚೂರು, ಬೀಳಗಿ ತಾಲೂಕಿನ ಹೆಗ್ಗೂರು ಗ್ರಾಮದ ಓರ್ವ ವ್ಯಕ್ತಿಯನ್ನು ಕಲಬುರಗಿ, ಮುಧೋಳ ತಾಲೂಕಿನ ಶಿರೋಳ ಗ್ರಾಮದ 4 ಜನರನ್ನು ರಾಯಚೂರು ಜಿಲ್ಲೆಯ ಮಸ್ಕಿ, ಕೊಪ್ಪಳ ಜಿಲ್ಲೆಯ ಕನಕಗಿರಿ, ಕಲಬುರಗಿ ಜಿಲ್ಲೆ ಆಳಂದ ಹಾಗೂ ಬೀದರ ಜಿಲ್ಲೆ ಬಸವಕಲ್ಯಾಣಕ್ಕೆ ಗಡಿಪಾರು ಮಾಡಲಾಗಿದೆ.
*- ರಮೇಶ ಸಂತೋಷ ಕಾಮಗೌಡ, ಉಪವಿಭಾಗಾಧಿಕಾರಿ*
*ಚುನಾವಣೆ : ಕಂಟ್ರೋಲ್ ರೂಂ ಸ್ಥಾಪನೆ*
ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಹಿನ್ನಲೆ ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಉಚಿತ ಸಹಾಯವಾಣಿ ಕೇಂದ್ರ (ಸಂಖ್ಯೆ 18004250462) ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಅಬಕಾರಿ ಅಕ್ರಮಗಳಾದ ಮಧ್ಯ ದಾಸ್ತಾನು, ಸಂಗ್ರಹಣೆ, ಮಾರಾಟ, ಹಂಚಿಕೆ ಇಂತಹ ಅಂಶಗಳು ಕಂಡುಬಂದಲ್ಲಿ ಸಹಾಯವಾಣಿಗೆ ದೂರು ಸಲ್ಲಿಸುವಂತೆ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.
5 ರಂದು ಜಗಜೀವನರಾಂ ಜಯಂತಿ
ವಿಧಾನಸಭೆ ಸಾರ್ವತ್ರಿಕ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಏಪ್ರೀಲ್ 5 ರಂದು ಜರಗುವ ಡಾ.ಬಾಬು ಜಗಜೀವನರಾಂ ಅವರ 116ನೇ ಜಯಂತಿ ಕಾರ್ಯಕ್ರಮವನ್ನು ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ ಹಳೆ ಸಭಾಭವನದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.