ತುಳಸಿಗೇರಿಯಲ್ಲಿ ನಡೆದ ರಾಜ್ಯಮಟ್ಟದ ಮಟ್ಟದ ಮಲ್ಲ ಕಂಬ ಸ್ಪರ್ಧೆ
ಬಾಗಲಕೋಟೆ
ಹಗ್ಗ ಹಿಡಿದು ಸರಸರನೇ ಮೇಲೇರುವ ಬಾಲಕಿಯರು, ಪಕ್ಕದಲ್ಲಿಯೇ ಕಂಬದ ಮೇಲೆ ನಾನಾ ಭಂಗಿ ಮಾಡುವ ಬಾಲಕರು, ಉಸಿರು ಗಟ್ಟಿ ಹಿಡಿದು ನೋಡುತ್ತ ಕುಳಿತ ಪ್ರೇಕ್ಷಕರು…
ಇದು ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ರಾಜ್ಯಮಟ್ಟದ ಮಲ್ಲಕಂಬದ ಎರಡನೇ ದಿನದ ದೃಶ್ಯಗಳು.
ಇದೇ ಸಲ ಶಾಲಾ ಕ್ರೀಡಾಕೂಟದಲ್ಲಿ ಸೇರ್ಪಡೆಗೊಂಡ ಮಲ್ಲಕಂಬ ಸ್ಪರ್ಧೆಗಳು ಕಳೆದ ಎರಡು ದಿನಗಳಿಂದ ತುಳಸಿಗೇರಿಯ ಆಂಜನೇಯನ ದೇವಸ್ಥಾನದ ಆವರಣದ ಮುಂದೆ ಹಾಕಿರುವ ವೇದಿಕೆ ಮುಂದೆ ನಡೆದವು.
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 600ಕ್ಕೂ ಹೆಚ್ಚು ಬಾಲಕ-ಬಾಲಕಿಯರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಇಲ್ಲಿಯವರೆಗೂ ಮಲ್ಲಕಂಬ ಅಸೋಶಿಯೇಷನ್‌ದಿಂದ ಮಾತ್ರ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದವು. ಆದರೆ ಇದೇ ಮೊದಲ ಸಲ ಸರಕಾರದ ಗಮನ ಸೆಳೆದು ಈ ಕ್ರೀಡೆಯನ್ನು ಶಾಲಾ ಕ್ರೀಡಾಕೂಟದಲ್ಲಿ ಸೇರಿಸಲಾಗಿದ್ದು, ಮಲ್ಲಕಂಬ ಸ್ಪರ್ಧಾಳುಗಳಿಗೆ ಮತ್ತಷ್ಟು ಬಲ ಸಿಕ್ಕದಂತಾಗಿದೆ.
ಕಿಕ್ಕಿರಿದು ತುಂಬಿದ ಗ್ಯಾಲರಿ
ಮಲ್ಲಕಂಬ ಪಂದ್ಯಗಳನ್ನು ವೀಕ್ಷಿಸಲು ಸುತ್ತಲು ಗ್ಯಾಲರಿ ನಿರ್ಮಿಸಲಾಗಿದ್ದು, ಅಂದಾಜು ನಾಲ್ಕು ಸಾವಿರದಷ್ಟು ಜನ ಏಕಕಾಕಲಕ್ಕೆ ಕುಳಿತು ವೀಕ್ಷಿಸಿದರು. ಜತೆಗೆ ಪ್ರತಿಯೊಬ್ಬ ಮಲ್ಲಕಂಬದ ಕ್ರೀಡಾಪಟುಗಳು ನಾನಾ ಭಂಗಿಗಳನ್ನು ಮಾಡುವಾಗ ಜೋರಾಗಿ ಕೂಗಿ ಅವರಿಗೆ ಹುರಿದುಂಬಿಸುತ್ತಿದ್ದರು.
ವ್ಯವಸ್ಥಿತ ಊಟ
ಮೂರು ದಿನಕ್ಕೂ ಗ್ರಾಮದವರ ಸಹಕಾರದಿಂದ ಬೆಳಗಿನ ಉಪಹಾರಕ್ಕೆ ಮೊಟ್ಟೆಘ, ಚಿಕ್ಕು, ಉಪ್ಪಿಟು, ಮಧ್ಯಾಹ್ನ ಹಾಗೂ ರಾತ್ರಿ ಕಡಕ ರೊಟ್ಟಿ, ಜಪಾತಿ, ಎರಡು ಪಲ್ಲೆ, ಅನ್ನಸಾರು ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಕೆಲ ಮಹಿಳೆಯರು ಹಾಗೂ ಪುರುಷರು ಸ್ವಯಂ ಪ್ರೇರಿತರಾಗಿ ಅಡುಗೆ ಮಾಡಿ ಬಂದಿರುವ ಕ್ರೀಡಾಪಟುಗಳ ಹಸಿವಿನ ದಾಹ ತೀರಿಸಿದರು.
ಚನ್ನಾಳ ರುವಾರಿ
ತುಳಸಿಗೇರಿಯ ದಿ.ಹನಮಂತಪ್ಪ ಉದಂಡಪ್ಪ ಪೂಜಾರ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಸಿ.ಕೆ.ಚನ್ನಾಳ ಈ ಮಲ್ಲಕಂಬ ಸ್ಪರ್ಧೆ ಇಷ್ಟು ಅಚ್ಚುಕಟ್ಟಾಗಿ ನಡೆಯಲು ರುವಾರಿಗಳಾಗಿದ್ದಾರೆ. ಅವರಿಗೆ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಶಿಕ್ಷಕರು ಸಾಥ್ ನೀಡಿದ್ದಾರೆ. ಸಿ.ಕೆ.ಚನ್ನಾಳ ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದವರು.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಹುನ್ನೂರಲ್ಲಿಯೇ ಪೂರೈಸಿದ ಅವರು, ನಂತರ ಜಮಖಂಡಿ ಬಿಎಲ್‌ಡಿ ಕಾಲೇಜ್‌ನಲ್ಲಿ ಪದವಿ ಪಡೆದರು. ಬಾಗಲಕೋಟೆಯ ಬಸವೇಶ್ವರ ಕಾಲೇಜ್‌ನಲ್ಲಿ ಬಿಪಿಎಡ್ ಮುಗಿಸಿ 1992ರಲ್ಲಿ ದೈಹಿಕ ಶಿಕ್ಷಕರಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ನೇಮಕಗೊಂಡರು. ಅಲ್ಲಿ ಮೊದಲಿಗೆ ಮಲ್ಲಕಂಬ ಆರಂಭಿಸಿದ ಚನ್ನಾಳ, 2003ರಲ್ಲಿ ತುಳಸಿಗೇರಿ ಪ್ರೌಢಶಾಲೆಗೆ ವರ್ಗಾವಣೆಯಾಗಿ ಬಂದು 2004ರಿಂದ ಮಲ್ಲಕಂಬ ತರಬೇತಿ ಆರಂಭಿಸಿದರು. ಅವರ ಕೈಯಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ಇಂದು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಮಲ್ಲಕಂಬದಲ್ಲಿ ಮಿಂಚಿದ್ದಾರೆ.
ಕ್ರೀಡಾಗ್ರಾಮ ತುಳಸಿಗೇರಿ
ತುಳಸಿಗೇರಿ ಎಂಬ ಗ್ರಾಮ ಮೊದಲಿನಿಂದಲೂ ಕ್ರೀಡೆಯಲ್ಲಿ ಸಾಕಷ್ಟು ಹೆಸರು ಮಾಡಿದೆ. ಅದರಲ್ಲೂ ಗ್ರಾಮೀಣ ಕ್ರೀಡಾಕೂಟದಲ್ಲಿ ಈ ಗ್ರಾಮದ ಹೆಸರು ಹಾಸು ಹೊಕ್ಕಾಗಿದೆ. ಕುಸ್ತಿ, ಸೈಕ್ಲಿಂಗ್, ಕಬಡ್ಡಿ, ಮಲ್ಲಕಂಬದ ಸ್ಪರ್ಧಿಗಳು ಈ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಸಿಗುತ್ತಾರೆ. ಹೀಗಾಗಿಯೇ ಇಲ್ಲಿನ ಇಬ್ಬರು ಸೈಕ್ಲಿಸ್ಟ್‌ಗಳು ಏಕಲವ್ಯ, ನಾಲ್ವರು ಮಲ್ಲಕಂಬ ಸ್ಪರ್ಧಿಗಳು ಕ್ರೀಡಾರತ್ನ, ಒಬ್ಬ ಕುಸ್ತಿಪಟು ಮೈಸೂರು ದಸರಾ ಕಂಠೀರವ ಪಡೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಸೈಕ್ಲಿಸ್ಟ್‌ಗಳು ರೈಲ್ವೆ ಇಲಾಖೆಯಲ್ಲಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇನ್ನೂ ಕುಸ್ತಿಪಟುಗಳು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುತ್ತಿದ್ದಾರೆ.