ರಾಮನಗರ: ಪ್ರತಿ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿ ಅಂಗವಾಗಿ ಕನಕಪುರದ ಏಳಗಳ್ಳಿಯಿಂದ ಸಂಗಮ ಮಾರ್ಗವಾಗಿ ಮಹದೇಶ್ವರ ಬೆಟ್ಟಕ್ಕೆ ನಡೆದುಕೊಂಡು ಹೋಗಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಸದ್ಯಕ್ಕೆ ಕಾವೇರಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳು ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ಮಾಹಿತಿ ತಿಳಿದು ಬಂದಿದೆ.
ನದಿ ದಾಟಲು ಅನುಕೂಲವಾಗುವಂತೆ ಎರಡು ಕಡೆ ಹಗ್ಗ ಕಟ್ಟಿದೆ. ಜತೆಗೆ ಇದೇ ಮೊದಲ ಭಾರಿಗೆ ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನವನ್ನು ಸಂಗಮ ಅರಣ್ಯದಲ್ಲಿ ನಿಯೋಜಿಸಿದೆ. ಜತೆಗೆ ಗ್ರಾಮಗಳಲ್ಲಿ ಮಜ್ಜಿಗೆ, ಪಾನಕ ವಿತರಣೆಗಳು ನಡೆಯುತ್ತಿವೆ. ಆದರೆ, ಅರಣ್ಯದೊಳಗೆ ಈ ಸೌಲಭ್ಯಗಳೆಲ್ಲವು ಕಷ್ಟವಾಗಿದೆ.ಕನಕಪುರ ತಾಲೂಕಿನ ಎಳಗಳ್ಳಿ ತಾಯಿ ಮುದ್ದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಸಂಗಮ ಮಾರ್ಗವಾಗಿ ಕಾವೇರಿ ನದಿ ದಾಟಿದರೆ, ತಾಳಬೆಟ್ಟ ತಲುಪುಬಹುದು. ಎಳಗಳ್ಳಿಯಿಂದ ಸುಮಾರು 30 ಕಿ.ಮೀ ದೂರ ಇದೇ ಮಾರ್ಗದಲ್ಲಿಸಾಗಿದರೆ ತಾಳಬೆಟ್ಟ ತಲುಪಬಹುದು.
ರಸ್ತೆ ಮಾರ್ಗದಲ್ಲಿ ಕನಿಷ್ಠ 150 ಕಿ.ಮೀ ಸಂಚರಿಸಬೇಕು. ಹೀಗಾಗಿ ಕಾವೇರಿ ನದಿ ಮೂಲಕವೇ ಮಹದೇಶ್ವರನ ದರ್ಶನ ಪಡೆಯಲು ಪ್ರತಿ ವರ್ಷ ಕನಿಷ್ಠ 1 ಲಕ್ಷಕ್ಕೂ ಹೆಚ್ಚು ಮಂದಿ ತೆರಳುತ್ತಾರೆ.ಭಾನುವಾರ ಸಂಜೆಯಿಂದ ಕಾಲ್ನಡಿಗೆ ಶುರುವಾಗಿದೆ. ಭಾನುವಾರ ಸಂಜೆಯಿಂದ ಸೋಮವಾರ ಸಂಜೆಯೊಳಗೆ 40 ಸಾವಿರಕ್ಕೂ ಹೆಚ್ಚಿನ ಯಾತ್ರಿಕರು ನದಿ ದಾಟಿ ಮುನ್ನೆಡೆದಿದ್ದಾರೆ. ಇನ್ನು ಶಿವರಾತ್ರಿ ವರೆಗೂ ನಿತ್ಯ ಇದೇ ಮಾರ್ಗದಲ್ಲಿ ಯಾತ್ರಿಗಳು ಮಾದಪ್ಪನ ದರ್ಶನಕ್ಕೆ ತೆರಳುವುದು ವಾಡಿಕೆ.ನದಿಯನ್ನು ಅಡ್ಡಲಾಗಿ ಸುಮಾರು 1ರಿಂದ 2 ಕಿ.ಮೀ ದೂರ ದಾಟಬೇಕಿದೆ.
ಈ ವೇಳೆ ನೀರಿನ ಹರಿವಿನ ಪ್ರಮಾಣದ ಮೇಲೆ, ಯಾತ್ರಿಗಳ ಬದುಕು ನಿರ್ಣಯಗೊಂಡಿದೆ. ಕೆಲವರು ಜೀವ ಕೈಯಲ್ಲಿ ಹಿಡಿದು ನದಿ ದಾಟುವ ಅನಿವಾರ‍್ಯತೆ ಎದುರಾಗಿದೆ. ಇದರೊಂದಿಗೆ ಕಾವೇರಿ ನದಿ ದಾಟುವ ವೇಳೆ ಕೆಲವೆಡೆ ಗುಂಡಿಗಳು ಇವೆ. ಹೀಗಾಗಿ ಏಕಾಏಕೀ ನೀರಿನಲ್ಲಿಸಿಲುಕುವ ಸಾಧ್ಯತೆಗಳು ದಟ್ಟವಾಗಿವೆ. ನೀರಿನ ಹರಿವು ಈ ವರ್ಷ ಕಡಿಮೆಯಾಗಿದ್ದರೂ, ನೀರಿನ ಸೆಳೆತವಂತು ಇದ್ದೇ ಇದೆ. ಹೀಗಾಗಿ ಆದಷ್ಟು ಎಚ್ಚರಿಕೆಯಿಂದ ಈ ನದಿ ದಾಟಬೇಕಿದೆ.