ಚಿತ್ರದುರ್ಗ: ಇಲ್ಲಿನ ಹಿರಿಯೂರು ನಗರದ ಮಧ್ಯಭಾಗದಲ್ಲಿರುವ ದಕ್ಷಿಣ ಕಾಶಿ ಐತಿಹಾಸಿಕ ಶ್ರೀ ತಿರುಮಲ್ಲೇಶ್ವರನ ಸ್ವಾಮಿಯ ಬ್ರಹ್ಮ ರಥೋತ್ಸವ ಶನಿವಾರ ಮಧ್ಯಾಹ್ನ 1.30ರ ಸಮಯದಲ್ಲಿ ಪಶುಪಾಲಕ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ಅದ್ದೂರಿಯಾಗಿ ನೆರವೇರಿತು.
ಹಿರಿಯೂರು ತಾಲೂಕಿನ ಬೀರನಹಳ್ಳಿ ಮುಜುರೆ ಕರಿಯಣ್ಣನಹಟ್ಟಿಯ ಕಾಡುಗೊಲ್ಲ ಸಮುದಾಯ ಪಶುಪಾಲಕ ವೀರಕರಿಯಣ್ಣ ದೇವರ ಮುಂದಾಳತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಬಳಿಕ ಬೆಳಿಗ್ಗೆ 9ಗಂಟೆಗೆ ದೇವಾಲಯದಲ್ಲಿನ ಶಿವ ಧನಸ್ಸನ್ನು ವೇದಾವತಿ ನದಿಗೆ ಕೊಂಡೊಯ್ಯದ್ದು, ಗಂಗಾ ಪೂಜೆ ನೆರವೇರಿಸಲಾಯಿತು. ನಂತರ ದೇಗುಲದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಲಂಕರಿಸಿದ ಬ್ರಹ್ಮರಥದಲ್ಲಿ ದೇವರನ್ನು ಪೂರೈಸಿ, ಮುಜರಾಯಿ ಇಲಾಖೆ ಅಧಿಕಾರಿ ಹಾಗೂ ತಾಶಿಲ್ದಾರ್ ಸಿ ರಾಜೇಶ್ ಕುಮಾರ್ ಅವರು ಪೂಜೆ ಸಲ್ಲಿಸಿದರು. ನಂತರ ಭಕ್ತರ ಸಮ್ಮುಖದಲ್ಲಿ ಮುಕ್ತಿ ಬಾವುಟದ ರಾಜ ಪ್ರಕ್ರಿಯೆ ನಡೆಯಿತು ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರು ದೇವರಿಗೆ ಪೂಜೆ ಸಲ್ಲಿಸಿ, ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆಯೇ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ನೂರಾರು ಭಕ್ತಾದಿಗಳು ಹರ ಹರ ಮಹಾದೇವ ಎಂದು ದೇವರನ್ನು ಸ್ಮರಿಸುತ್ತಾ ರಥದ ಹಗ್ಗವನ್ನು ಹಿಡಿದು ಎಳೆಯವ ಮೂಲಕ ದೇವಸ್ಥಾನ ಮುಂಭಾಗದಿಂದ ಆರಂಭಗೊಂಡ ಬ್ರಹ್ಮ ರಥೋತ್ಸವ ಕರಡಿ ಚಮಳ, ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ವಾದ್ಯಗಳು ಹಾಗೂ ಸಾವಿರಾರು ಭಕ್ತರ ಘೋಷಣೆಗಳೊಂದಿಗೆ ವಾಸವಿ ರಸ್ತೆಯ ಮೂಲಕ ಸಿದ್ದನಾಯಕ ಸರ್ಕಲ್‌ವರೆಗೂ ಸಾವಿರಾರು ಭಕ್ತಾಗಳು ಉತ್ಸವದಿಂದ ರಥವನ್ನು ಎಳೆದರು ಎಂದು ಮಾಹಿತಿ ತಿಳಿದು ಬಂದಿದೆ.