ಮೈಸೂರು: ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಜಾತಿ ಮನೋಭಾವವನ್ನು ಜನರಲ್ಲಿ ಕೆರಳಿಸಿ ಅದನ್ನು ಮತವಾಗಿ ಪರಿಗಣಿಸಲು ಹೊರಟಿದ್ದು, ನಿಜಕ್ಕೂ ಆಗಬೇಕಿರುವುದು ದೇಶದ ಉಳಿವಿನ ಪರಿಕಲ್ಪನೆ ಆಧಾರದ ಚುನಾವಣೆ. ಈ ಉದ್ದೇಶ ಸಾಕಾರಗೊಳ್ಳಲು ಪ್ರಧಾನಿ ನರೇಂದ್ರ ನಾಯಕತ್ವ ಅಗತ್ಯ ಎಂದು ಮಾಜಿ ಸಚಿವ ಸಿ ಟಿ ರವಿ ತಿಳಿಸಿದರು.
ಮೈಸೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, “ದೇಶದ ಉಳಿವಿನ ಪರಿಕಲ್ಪನೆಯೇ ಈ ಬಾರಿಯ ಚುನಾವಣೆ ಅಜೆಂಡಾ. ಈ ನಿಟ್ಟಿನಲ್ಲಿ ನಮ್ಮ ದೇಶದ ಸಮರ್ಥ ನಾಯಕ ಪ್ರಧಾನಿ ನರೇಂದ್ರ ಮೋದಿ ಕಾರ್ಯಪ್ರವೃತರಾಗಿದ್ದಾರೆ. ಅವರನ್ನು ನಾವೆಲ್ಲರೂ ಬೆಂಬಲಿಸಬೇಕು,” ಎಂದು ಮನವಿ ಮಾಡಿದರು.
”ಹಿಂದೆ ಕಂದಾಯ ಸಚಿವರಾಗಿದ್ದಾಗ ಶ್ರೀನಿವಾಸ್ ಪ್ರಸಾದ್ ಅವರು ಹೈಕಮಾಂಡ್ಗೆ ಕಪ್ಪ ಕಾಣಿಕೆ ನೀಡಲಿಲ್ಲಎಂಬ ಕಾರಣಕ್ಕೆ ಸಚಿವ ಸ್ಥಾನದಿಂದ ಕೆಳಗಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಹಳೆಯ ಗೆಳೆತನವನ್ನು ನೆನಪಿಸಿಕೊಂಡು ದೋಸ್ತಿ ಬೆಳೆಸಲು ಅವರನ್ನು ಭೇಟಿ ಮಾಡಿದ್ದಾರೆ. ಇದರ ಹಿಂದಿನ ಮರ್ಮ ರಾಜ್ಯದ ಜನತೆಗೆ ತಿಳಿದಿದೆ. ಹಾಗಾಗಿ, ಅದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ,” ಎಂದರು.
”ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಭ್ಯರ್ಥಿ ಪರವಾಗಿ ಮತ ಯಾಚಿಸುವಾಗ ಒಕ್ಕಲಿಗರು ಕಾಂಗ್ರೆಸ್ ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ. ಆದರೆ, ಒಕ್ಕಲಿಗ ಸಮುದಾಯ ಹಿಂದಿನಿಂದಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ರಾಜ ಪರಂಪರೆಯನ್ನು ಬೆಂಬಲಿಸಿಕೊಂಡು ಬಂದಿದೆ. ಮಾತ್ರವಲ್ಲದೇ ಅವರ ನಿಷ್ಠೆ ಏನಿದ್ದರೂ ಮೈಸೂರು ಸಂಸ್ಥಾನಕ್ಕೆ,” ಎಂದರು.