ಬೆಂಗಳೂರು: ”ಎಲ್ಲಾ ಸಮುದಾಯಗಳಲ್ಲೂ ನಾಲ್ಕಾರು ಪುಂಡರಿರುತ್ತಾರೆ. ಅವರನ್ನು ಹಿಡಿದು ಒಳಗೆ ಹಾಕಿದರೆ ಎಲ್ಲವೂ ಸರಿಯಾಗುತ್ತದೆ, ಇಲ್ಲವಾದರೆ ಇವತ್ತು ಭಗವಾ ಧ್ವಜ ಇಳಿಸ್ತಾರೆ, ನಾಳೆ ರಾಷ್ಟ್ರಧ್ವಜ ಇಳಿಸ್ತಾರೆ, ದೇಶಕ್ಕೇ ಬೆಂಕಿ ಹಚ್ಚುತ್ತಾರೆ..” – ಹೀಗೆಂದು ಹೈಕೋರ್ಟ್ ಭಗವಾ ಧ್ವಜವನ್ನು ಕೆಳಕ್ಕೆ ಇಳಿಸಿದ ಶಿಗ್ಗಾಂವಿಯ ಪ್ರಕರಣದ ವಿಚಾರಣೆ ವೇಳೆ ಕಿಡಿಕಾರಿತು.
ವಿಚಾರಣೆ ಮಧ್ಯದಲ್ಲಿಯೇ ಸ್ಥಳದಲ್ಲಿ ಧ್ವಜ ಇಳಿಸಿದ್ದಾರೆಯೇ ಇಲ್ಲವೇ ಎಂಬುದನ್ನು ವಾಟ್ಸ್‌ಆ್ಯಪ್ ಮೂಲಕ ಛಾಯಾಚಿತ್ರ ತರಿಸಿಕೊಂಡು ವೀಕ್ಷಿಸಿದ ನ್ಯಾಯಮೂರ್ತಿ, ಧ್ವಜಕ್ಕೆ ಯಾವುದೇ ಅಡ್ಡಿಯಾಗಿಲ್ಲವೆಂಬುದನ್ನು ಖಾತರಿಪಡಿಸಿಕೊಂಡು ತನಿಖೆಗೆ ಮಧ್ಯಂತರ ತಡೆ ನೀಡಿ, ವಿಚಾರಣೆಯನ್ನು ಎರಡು ವಾರ ಕಾಲ ಮುಂದೂಡಿದರು.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕಾರಡಗಿ ಗ್ರಾಮದ ಜುಮ್ಮಾ ಮಸೀದಿಯ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಹಲವಾರು ವರ್ಷಗಳಿಂದಿರುವ ಭಗವಾ ಧ್ವಜ ಕೆಳಗಿಳಿಸಿ ಗ್ರಾಮದಲ್ಲಿ ಕೋಮು ಸೌಹಾರ್ದ ಕದಡಲು ಪಿತೂರಿ ನಡೆಸಲಾಗಿದೆಯೆಂಬ ಆರೋಪ ಸಂಬಂಧ ಹುಲಗೂರು ಪೊಲೀಸರು ದಾಖಲಿಸಿರುವ ದೂರು ರದ್ದು ಕೋರಿ ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಶೇಷ ಪೀಠ ವಿಚಾರಣೆ ನಡೆಸಿತು.
ಸಂಭಾಷಣೆ ನಡೆಸಿರುವ ಆರೋಪಿಗಳ ಧ್ವನಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಒಂದು ವೇಳೆ ಆರೋಪಿಗಳು ಯಾವುದಾದರೂ ಅಹಿತಕರ ಘಟನೆಯಲ್ಲಿ ಭಾಗಿಯಾಗಿದ್ದರೆ ಪೊಲೀಸರು ತಕ್ಷಣವೇ ಅವರನ್ನು ಬಂಧಿಸಬೇಕು. ಆರೋಪಿಯ ಕುಟುಂಬದಲ್ಲಿ ಯಾರಾದರೂ ಕ್ರಿಮಿನಲ್ ಹಿನ್ನೆಲೆಯುಳ್ಳವರು ಇದ್ದಾರೆಯೇ ಎಂಬುದನ್ನು ಮುಂದಿನ ವಿಚಾರಣೆ ವೇಳೆಗೆ ತಿಳಿಸಬೇಕು ಎಂದು ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ -2 ಬಿ.ಎನ್ ಜಗದೀಶ್ ಅವರಿಗೆ ಆದೇಶಿಸಿದರು.