108 ಅಡಿ ಉದ್ದದ ಮಲ್ಲಯ್ಯ ಧ್ವಜ
ನಿಮ್ಮ ಸುದ್ದಿ ಬಾಗಲಕೋಟೆ
ಮಾರ್ಚ್ ತಿಂಗಳು ಮಲ್ಲಯ್ಯನ ಪಾದಯಾತ್ರೆ ಮಾಡುವ ಭಕ್ತರಿಗೆ ಶ್ರೀಶೈಲ ಮಲ್ಲಿಕಾರ್ಜುನದೇ ಧ್ಯಾನ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಉತ್ತರ ಕರ್ನಾಟಕ ಭಾಗದಿಂದ ಪಾದಯಾತ್ರೆ ಕೈಗೊಳ್ಳುವುದಕ್ಕೆ ಶತ ಶತಮಾನಗಳ ಇತಿಹಾಸವಿದೆ.
ಈ ಇತಿಹಾಸಕ್ಕೆ ರಾಜಧಾನಿ ಬೆಂಗಳೂರಿನ ನಂಟು ಬೆಳೆಸಿ ಭಕ್ತಿಯ ನಂಟು ಹಚ್ಚಿದ್ದಾರೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಯುವ ಉದ್ಯಮಿ ಮಂಜುನಾಥ ಬಂಡಿ. ಪ್ರತಿ ವರ್ಷ ರಾಜಧಾನಿಯಿಂದ 25 ಜನರನ್ನು ಕರೆತಂದು 450 ಕಿಮೀ ನಡೆಸಿ ಅವರಲ್ಲಿ ಭಕ್ತಿ ಬೀಜವನ್ನು ಬಿತ್ತುತ್ತಿದ್ದಾರೆ.
ಈ ಬಾರಿ ಮಾರ್ಚ್ 29ರ ಸೋಮವಾರ ಆರಂಭಗೊಳ್ಳಲಿರುವ ಈ ಪಾದಯಾತ್ರೆಗಾಗಿ ವಿಶೇಷ ತಯಾರಿ ನಡೆಯುತ್ತಿದ್ದು ಬೆಂಗಳೂರಿನ ಅಮ್ಮ ಫೌಂಡೇಶನ್ ಮತ್ತು ಅಮೀನಗಡ ಶ್ರೀಶೈಲ ಪಾದಯಾತ್ರೆ ಸದ್ಭಕ್ತ ಮಂಡಳಿ ಈ ಬಾರಿ ವಿಶೇಷ ಕಾರ್ಯಕ್ರಮವೊಂದನ್ನು ಹಾಕಿಕೊಂಡಿದ್ದಾರೆ.
ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿರುವುದರ ಹಿನ್ನಲೆಯಲ್ಲಿ 8 ಅಡಿ ಉದ್ದನೆಯ 6 ಅಡಿ ಅಗಲ ಹೊಂದಿದ ದೇಶದ ಅತ ದೊಡ್ಡ ಮಾಸ್ಕ್ ತಯಾರಿಸಿದ್ದು, ಪಾದಯಾತ್ರೆ ದಿನದಂದು ಅಮೀನಗಡ ಪಟ್ಟಣದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರದ ಜಾಗೃತಿ ಅಭಿಯಾನ ಜೊತೆಗೆ 108 ಅಡಿಗಳ ಉದ್ದನೆಯ ಶ್ರೀಶೈಲ ಮಲ್ಲಯ್ಯನ ಧ್ವಜ ಮಾಡಿ ಜನರಲ್ಲಿ ಪಾದಯಾತ್ರೆ ಜಾಗೃತಿ ಮತ್ತು ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಭರದ ತಯಾರಿ ನಡೆಯುತ್ತಿದೆ.
ಬಾಗಲಕೋಟೆಯ ಖ್ಯಾತ ಕಲಾವಿದ ಅಸ್ಲಾಂ ಕಲಾದಗಿ ಹಾಗೂ ರವೀಂದ್ರ ಬಂಡಿ ಅವರು ಆಕರ್ಷಕ ಮಲ್ಲಯ್ಯನ ಚಿತ್ರ ಮಾಸ್ಕ್ ಜಾಗೃತಿಯ ಸಂದೇಶಗಳನ್ನು ಬಿ ಡಿಸಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.
ಮಾ.29ರ ಸಂಜೆ 4ಕ್ಕೆ 108 ಅಡಿ ಉದ್ದದ ಧ್ವಜ ಅನಾವರಣವನ್ನು ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ನೆರವೇರಿಸಲಿದ್ದಾರೆ. ಸ್ಥಳೀಯ ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ, ಶ್ರೀಶೈಲ ಜಗದ್ಗುರು ಪೀಠದ ಶಾಖಾ ಮಠ ಬಳ್ಳಾರಿ ಜಿಲ್ಲೆಯ ಸಂಡೂರ್ ತಾಲೂಕಿನ ಡಿ.ಅಂತಾಪುರದ ಕುಮಾರ ಪಂಡಿತಾರಾಧ್ಯ ಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದಾರೆ.
ಬೆಂಗಳೂರಿನ ನಾಗಾರ್ಜುನ ವಿ. ವಿ. ಯ ಡೈರೆಕ್ಟರ್ ಮನೋಹರ್ ನರೋಜಿ, ರಾಷ್ಟ್ರೀಯ ವಾಲಿಬಾಲ್ ಮಾಜಿ ಆಟಗಾರ ರೋಹಿತ್ ಕೆಂಪೇಗೌಡ, ರಾಷ್ಟ್ರೀಯ ಓಟಗಾರ್ತಿ ಪ್ರಮೀಳಾ ಗಟ್ಟಿ, ಸಂಪನ್ಮೂಲಗಳ ವ್ಯಕ್ತಿ ರಮೇಶ್ ಉಮ್ರಾಣಿ, ಜ್ಞಾನಜ್ಯೋತಿ ಕಾಲೇಜ್ ಪ್ರಾಚಾರ್ಯ ರಮೇಶ್ ಸೇರಿದಂತೆ ಅಮೀನಗಡ ಪಟ್ಟಣದ ಅನೇಕ ಗಣ್ಯರ ಸಮ್ಮುಖದಲ್ಲಿ 150 ಕೆಜಿ ಹೂವುಗಳ ಪುಷ್ಪರ್ಚನೆ ಮೂಲಕ ಪಥ ಸಂಚಲನ ನಡೆಯಲಿದೆ ಎಂದು ಕಾರ್ಯಕ್ರಮ ರೂವಾರಿ ಮಂಜುನಾಥ್ ಬಂಡಿ ತಿಳಿಸಿದ್ದಾರೆ.