ಇದು ಅಮೀನಗಡ ಪಪಂ ಕಚೇರಿ ಸ್ಥಿತಿ
ನಿಮ್ಮ ಸುದ್ದಿ ಬಾಗಲಕೋಟೆ
ರಾಜ್ಯದಲ್ಲಿ ಕೊರೋನಾ ರೂಪಾಂತರಿ ತಳಿ ಒಮಿಕ್ರಾನ್ ಪತ್ತೆಯಾದ ಹಿನ್ನೆಲೆಯಲ್ಲಿ ಸರಕಾರ ಕೆಲ ಬಿಗಿ ಕ್ರಮಗಳನ್ನು ಸೂಚಿಸದರೂ ಅದನ್ನು ಪಾಲಿಸಬೇಕಾದ ಸರಕಾರಿ ಕಚೇರಿ ಸಿಬ್ಬಂದಿ ನಿರ್ಲಕ್ಷ್ಯ ತೋರಿದಂತೆ ಕಾಣುತ್ತಿದೆ.
ಇದಕ್ಕೆ ತಾಜಾ ಉದಾಹರಣೆ ಎಂದರೆ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ಕಚೇರಿ ಎನ್ನಬಹುದು.
ಮಾಸ್ಕ್ ಧರಿಸದವರಿಗೆ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ದಂಡ ವಿಧಿಸಬೇಕು ಎಂದು ಸರಕಾರ ಹೇಳಿದರೆ ಇಲ್ಲಿನ ಕಚೇರಿ ಸಿಬ್ಬಂದಿ ಮಾತ್ರ ಕ್ಯಾರೇ ಎನ್ನುತ್ತಿಲ್ಲ ಎಂಬ ದೂರು ಕೇಳಿದೆ.
ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಕಾರ್ಯ ಭರದಿಂದ ಸಾಗಿದ್ದು ಕಚೇರಿ ಹೊರಗೆ ಕೊರೊನಾ ಜಾಗೃತಿಯ ಸೂಚನೆ ಕಾಣುತ್ತಿದೆಯೇ ಹೊರತು ಪಾಲನೆ ಶೂನ್ಯ ಎಂಬಂತಾಗಿದೆ.
ಚುನಾವಣೆ ಕಾವು ಏರುತ್ತಿರುವ ಈ ಅವಧಿಯಲ್ಲಿ ಕಚೇರಿಗೆ ಆಗಮಿಸುತ್ತಿರುವ ಸಾರ್ವಜನಿಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಅವಧಿಯಲ್ಲಿ ಒಬ್ಬರಿಗೆನಾದರೂ ಕೊರೋನಾ ಲಕ್ಷಣಗಳಿದ್ದರೆ ಗತಿ ಏನು ಎಂಬಂತಾಗಿದೆ.
ಈಗಲಾದರೂ ಎಚ್ಚೆತ್ತುಕೊಂಡು ಕಚೇರಿ ಸಿಬ್ಬಂದಿಯಾದರೂ ನಿಯಮ ಪಾಲನೆ ಮಾಡುವ ಮೂಲಕ ಇತರರಿಗೂ ಮಾದರಿ ಆಗಲಿ. ಗೋಡೆ ಫಲಕಕ್ಕೆ ಸರಕಾರಿ ಆದೇಶ ಸೀಮಿತವಾಗದೆ ಜಾರಿಗೊಳ್ಳಲಿ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.