ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಡೆಸುತ್ತಿರುವ `ಚೊಂಬು’ ಅಭಿಯಾನದ ವಿರುದ್ಧ ಇದೀಗ ಬಿಜೆಪಿ `ಚಿಪ್ಪು’ ಅಭಿಯಾನ ಪ್ರಾರಂಭಿಸಿದ್ದು, ಈ ವಿಷಯಕ್ಕೆ ಸಂಬಂಧಿಸಿ ವಿಪಕ್ಷ ನಾಯಕ ಆರ್ ಅಶೋಕ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟರ್ ಗಳನ್ನು ಹಾಕಿ `ನಮ್ಮ ನಾಡಿನ ದಲಿತರ, ರೈತರು, ಮಹಿಳೆಯರು ಹಾಗೂ ಬಡವರಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟಿದ್ದು ಬರೀ ಚಿಪ್ಪು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಬಿಜೆಪಿ ಸರ್ಕಾರದ ಹಿಂದಿ ಹೇರಿಕೆಯಿಂದಾಗಿ ಪ್ರಾದೇಶಿಕ ಭಾಷೆಯಾಗಿರುವ ಕನ್ನಡದ ಅಸ್ಮಿತೆಗೆ ಧಕ್ಕೆ ಆಗುತ್ತಿದೆ ಎಂಬುದು ಕಾಂಗ್ರೆಸ್ ಪಕ್ಷದ ಆರೋಪವಾಗಿದೆ. ಇದೀಗ ವಿವೇಕ ಯೋಜನೆಯನ್ನು ಸ್ಥಗಿತಗೊಳಿಸುವ ವಿಚಾರವನ್ನು ಪ್ರಸ್ತಾಪಿಸಿ ತಿರುಗೇಟು ನೀಡಿದರು.
ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ವರ್ಷಕ್ಕೆ 6 ಸಾವಿರ ರೂಪಾಯಿಗಳನ್ನು ನೀಡುತ್ತಿದ್ದು, ಹಿಂದಿನ ಬಿಜೆಪಿ ಸರ್ಕಾರ ಇರುವಾಗ ಈ ಮೊತ್ತಕ್ಕೆ ಒಟ್ಟು 4 ಸಾವಿರ ಸೇರಿಸಿ ನೀಡುತ್ತಿದ್ದುದರಿಂದ ರೈತರಿಗೆ ಒಟ್ಟು 10 ಸಾವಿರ ರೂಪಾಯಿ ಸಿಗುತ್ತಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಯೋಜನೆಯ ಹಣವನ್ನು ನಿಲ್ಲಿಸಿದ್ದರಿಂದ ರೈತರಿಗೆ ಈಗ ಕೇಂದ್ರ ಸರ್ಕಾರದಿಂದ ನೀಡಲ್ಪಡುವ 6 ಸಾವಿರ ರೂಪಾಯಿ ಮಾತ್ರ ಸಿಗುತ್ತಿದೆ. ಈ ವಿಚಾರವನ್ನು ಆರ್ ಅಶೋಕ್ ಪ್ರಸ್ತಾಪಿಸಿದರು.
ಬಸವರಾಜ ನೇತೃತ್ವದ ಬಿಜೆಪಿ ಸರ್ಕಾರದ ಬಜೆಟ್ ನಲ್ಲಿ 11 ಸಾವಿರ ಕೋಟಿ ರೂಪಾಯಿ ಅನ್ನು ದಲಿತರ ಅಭಿವೃದ್ಧಿಗೆ ಎಂದು ತೆಗೆದಿಡಲಾಗಿತ್ತು. ಕಾಂಗ್ರಸ್ ಸರ್ಕಾರ ಅದನ್ನು ರದ್ದುಪಡಿಸಿ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ ಎಂಬುದು ಬಿಜೆಪಿಯ ಆರೋಪವಾಗಿದೆ. ಈ ವಿಚಾರವನ್ನು ಸಹ ಪ್ರಸ್ತಾಪಿಸಿ ಅಶೋಕ್ ಅವರು ಕಾಂಗ್ರೆಸ್ ನ ಕಾಲೆಳೆದಿದ್ದು, ಭಾಗ್ಯಲಕ್ಷ್ಮೀ ಯೋಜನೆ ಸ್ಥಗಿತ, ವಿವೇಕ ಯೋಜನೆ ಸ್ಥಗಿತ, ಕಿಸಾನ್ ಸಮ್ಮಾನ್ ಯೋಜನೆ, ದಲಿತರ ಅನುದಾನ ವಿಚಾರಗಳನ್ನು ಪ್ರಸ್ತಾಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದರು.