ನಿಮ್ಮ ಸುದ್ದಿ ಬಾಗಲಕೋಟೆ
ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ರಾಮನಗರ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಅಭಿವೃದ್ಧಿ ವಿಷಯಗಳಿಲ್ಲದ ಕಾರಣ ಬಿಜೆಪಿಯವರು ಪ್ರಧಾನಿ ಮೋದಿ ಕರೆಸುತ್ತಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಈಶ್ವರಪ್ಪ ಪ್ರತಿಕ್ರಿಯಿಸಿದರು.
ಜಿಲ್ಲೆಯ ಕೂಡಲಸಂಗಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ, ಮಂಡ್ಯ, ಹಾಸನ ಬಿಟ್ಟರೆ ಕುಮಾರಸ್ವಾಮಿ ಅವರಿಗೆ ಬೇರೆ ಏನೂ ಗೊತ್ತಿಲ್ಲ. ಅದಕ್ಕಾಗಿಯೇ ಜನರು ಅವರನ್ನು ಆ ಪ್ರದೇಶಕ್ಕೆ ಸೀಮಿತವಾಗಿಸಿದ್ದಾರೆ. ಮೋದಿ ವಿಶ್ವನಾಯಕರಾಗಿದ್ದಾರೆ, ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದು ರಾಷ್ಟ್ರೀಯ ಯುವಜನೋತ್ಸವ. ಇಂತಹ ಬೃಹತ್ ಕಾರ್ಯಕ್ರಮಕ್ಕೆ ಪ್ರಧಾನಿ ಬರುತ್ತಾರೆ. ವಿಶ್ವವೇ ಒಪ್ಪಿದ ಮೋದಿಯವರನ್ನು ಒಪ್ಪುವುದಕ್ಕೆ, ಬಿಡುವುದಕ್ಕೆ ಕುಮಾರಸ್ವಾಮಿ ಯಾರು?. ಅವರು ಮೊದಲು ಕೂಪಮಂಡೂಕ ಭಾವನೆಯಿಂದ ಹೊರಬರಲಿ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ವಿಚಾರಕ್ಕೆ ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಗೆ ಬಂದವರು ಈಗ ಕೋಲಾರಕ್ಕೆ ಹೊರಟಿದ್ದಾರೆ. ಅಭಿವೃದ್ಧಿ ಮಾಡಿದ್ದರೆ ಬಾದಾಮಿಯಿಂದ ಸ್ಪರ್ಧಿಸಬೇಕಿತ್ತು. ಇಂದು ಸ್ಫರ್ಧಿಸಿ ನಾಳೆ ಹೋಗುತ್ತಾರೆ ಎಂದರೆ ಕೋಲಾರದಲ್ಲೂ ಹೀಗೆ ಆಗುತ್ತದೆ. ಹೀಗಾದರೆ ರಾಜಕಾರಣಿಗಳ ಮೇಲಿನ ವಿಶ್ವಾಸ ಹೊರಟು ಹೋಗುತ್ತದೆ. ನಾವು ಪ್ರತಿನಿಸುವ ಕ್ಷೇತ್ರದ ಜನರ ಋಣ ತೀರಿಸಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು ಎಂದರು.
ಪಂಚಮಸಾಲಿ ಸಮಾಜಕ್ಕೆ ೨ಡಿ ಮೀಸಲಾತಿಗೆ ಕೋರ್ಟ್ ತಡೆಯಾಜ್ಞೆ ನೀಡಿದ ವಿಷಯಕ್ಕೆ ಈಗ ಎಲ್ಲ ಜಾತಿಯವರೂ ಮೀಸಲಾತಿ ಎನ್ನುತ್ತಿದ್ದಾರೆ, ಮೀಸಲಾತಿ ಹೋರಾಟ ಫ್ಯಾನ್ಸಿ ಆಗಿದೆ. ಕಡು ಬಡವರಿಗೆ ಮೀಸಲಾತಿ ದೊರೆತರೆ ಒಳ್ಳೆಯದು, ನಾನು ಹಾಗೂ ಮಲ್ಲಿಕಾರ್ಜುನ ಖರ್ಗೆಯಂತಹವರು ಮೀಸಲಾತಿ ಪಡೆಯಬೇಕಿಲ್ಲ. ನಾನು ಕೂಡ ಎಸ್‌ಟಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡಿದ್ದೆ ಎಂದು ಉತ್ತರಿಸಿದರು.
ಸಚಿವ ಸಂಪುಟ ವಿಸ್ತರಣೆ ಪ್ರಶ್ನೆಗೆ ಎಲ್ಲರೂ ಎಂಎಲ್‌ಎ, ಸಚಿವರು ಆಗಬೇಕು ಎಂದೇನಿಲ್ಲ. ಪಾರ್ಟಿ ಕಾರ್ಯಕರ್ತ ಎನ್ನುವ ಪದವೇ ಶಾಶ್ವತ. ಜನರು ಬಿಜೆಪಿಗೆ ಬಹುಮತ ನೀಡಬೇಕು, ಆಗ ಸಚಿವ ಸ್ಥಾನ ನಿರ್ಧರಿಸುವ ಸ್ವಾತಂತ್ರ ನಮ್ಮವರಿಗೆ ಇರುತ್ತಿತ್ತು. ಇಲ್ಲವಾದರೆ ಇಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಬಿಜೆಪಿಗೆ ಬೇರೆ ಕಡೆಯಿಂದ ಬಂದವರಿಗೆ ಸ್ಥಾನ ಕೊಡಬೇಕಾಗುತ್ತದೆ. ಸಂಪುಟದಲ್ಲಿ ನನಗೆ ಸ್ಥಾನ ಸಿಗಬಹುದು, ದೊರೆಯದಿರಬಹುದು. ಆದಷ್ಟು ಬೇಗ ವಿಸ್ತರಣೆ ಎಂದು ಸಿಎಂ ಹೇಳಿದ್ದಾರೆ. ನೀವು ಅವರನ್ನೇ ಈ ಪ್ರಶ್ನೆ ಕೇಳಬೇಕು ಎಂದು ಹೇಳಿದರು.
ಸ್ಯಾಂಟ್ರೋ ರವಿ ಬಗ್ಗೆ ದಿನೇಶ್ ಗುಂಡೂರಾವ್ ಟ್ವೀಟ್‌ಗೆ `ಸ್ಯಾಂಟ್ರೋ ರವಿ ಆತನ ಬಂಧನವಾದ ನಂತರ ದಿನೇಶ್ ಅವರ ಹಣೆಬರಹ ಏನು ?. ಆತ ಬಂಧನಕ್ಕೊಳಗಾದ ನಂತರ ಇವರೆಲ್ಲರ ಬೆಳಕು ಹೊರಬರುತ್ತದೆ’ ಎಂದರು.