ಮೊದಲ ಹಂತದ ಹೋರಾಟ ಯಶಸ್ವಿ – ಎರಡನೇ ಹಂತದ ಹೋರಾಟಕ್ಕೆ ಅಣಿ: ಶ್ರೀ ವಚನಾನಂದ ಮಹಾಸ್ವಾಮಿಗಳು
ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ
ನಿಮ್ಮ ಸುದ್ದಿ ಬೆಂಗಳೂರು
3 ದಶಕಗಳ ಮೊದಲ ಹಂತದ ಹೋರಾಟ ಇಂದು ಯಶಸ್ಸು ಕಂಡಿದೆ, ಪಂಚಮಸಾಲಿ ಸಮುದಾಯದ ಪ್ರತಿಯೊಬ್ಬರಿಗೂ ಮೀಸಲಾತಿಯ ಲಾಭ ದೊರಕಿಸಿಕೊಡುವ ಎರಡನೇ ಹಂತದ ಹೋರಾಟಕ್ಕೆ ಹರಿಹರ ಪೀಠ ಅಣಿಯಾಗಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀಶ್ರೀಶ್ರೀ ವಚನಾನಂದ ಮಹಾಸ್ವಾಮಿಗಳು ಪ್ರತಿಕ್ರಿಯಿಸಿದರು.
ಇಂದು ರಾಜ್ಯ ಸರಕಾರ ಪಂಚಮಸಾಲಿ ಸಮುದಾಯಕ್ಕೆ 2 ಡಿ ಮೀಸಲಾತಿಯ ಮೂಲಕ ಶೇಕಡಾ 7 ರಷ್ಟು ಪ್ರಾತಿನಿಧ್ಯ ನೀಡುವ ಸ್ಪಷ್ಟ ನಿರ್ಧಾರದ ಘೋಷಣೆಯ ನಂತರ ಮಾಧ್ಯಮಗಳಿಗೆ ಈ ಪ್ರತಿಕ್ರಿಯೆ ನೀಡಿದರು. ಹರಿಹರ ಪಂಚಮಸಾಲಿ ಪೀಠ ಸಮುದಾಯಕ್ಕೆ ಮೀಸಲಾತಿಯನ್ನು ದೊರಕಿಸಿಕೊಡುವ ಪ್ರಾಥಮಿಕ ಗುರಿಯ ಹಿನ್ನಲೆಯಲ್ಲಿ ಸ್ಥಾಪಿಸಲಾದ ಪೀಠವಾಗಿದೆ. ಈ ಪೀಠದ ಪೀಠಾಧ್ಯಕ್ಷರಾದ ನಂತರ ಹೋರಾಟವನ್ನ ಮತ್ತುಷ್ಟು ತೀವ್ರಗೊಳಿಸಿದ್ದೇವು. ಈ ಹೋರಾಟವನ್ನ ಸೂಕ್ತ ರೀತಿಯಲ್ಲಿ ಮುನ್ನಡೆಸುವ ಮೂಲಕ ಆಯೋಗಕ್ಕೆ ಸೂಕ್ತ ದಾಖಲಾತಿಯನ್ನ ಸಲ್ಲಿಸಿದ್ದೇವು. ಸೂಕ್ತ ದಾಖಲಾತಿ ಹಾಗೂ ಸಮರ್ಪಕವಾದ ವಾದದ ಪರಿಣಾಮವಾಗಿ ಹಿಂದುಳಿದ ಆಯೋಗ ಮಧ್ಯಂತರ ವರದಿಯನ್ನು ನೀಡಿದೆ. ಈ ವರದಿಯ ಅನ್ವಯ ಹಾಗೂ ರಾಷ್ಟ್ರೀಯ ನಾಯಕರೊಂದಿಗಿನ ಚರ್ಚೆ ಫಲ ನೀಡಿದ್ದು, ಇಂದು ಮೀಸಲಾತಿಯ ಸ್ಪಷ್ಟ ಚಿತ್ರಣ ದೊರೆತಿದೆ. ಇದನ್ನ ನಾವು ಸ್ವಾಗತಿಸುತ್ತೇವೆ. ನಮ್ಮ ಸಮುದಾಯಕ್ಕೆ ಶೈಕ್ಷಣಿಕ ಹಾಗೂ ಸಾಮಾಜಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆಯುವುದು ಅಗತ್ಯವಿತ್ತು. ಅದು ಇಂದು ಈಡೇರಿದೆ. ಆದರೆ, ಅದು ಅನುಷ್ಠಾನಗೊಂಡು ನಮ್ಮ ಸಮುದಾಯದ ಎಲ್ಲರಿಗೂ ಅದರ ಸದುಪಯೋಗ ಆಗಬೇಕು. ಈ ನಿಟ್ಟಿನಲ್ಲಿ ನಾವು ಕಾನೂನಾತ್ಮಕವಾಗಿ ಹಾಗೂ ಸಾಂವಿಧಾನತ್ಮಕವಾಗಿ ಎರಡನೇ ಹಂತದ ಹೋರಾಟದಲ್ಲಿ ತೊಡಗಿಕೊಳ್ಳುತ್ತೇವೆ. ಎಲ್ಲರಿಗೂ ಮೀಸಲಾತಿಯ ಲಾಭ ದೊರಕಿಸಿಕೊಡುವ ವರೆಗೂ ವಿಶ್ರಮಿಸುವುದಿಲ್ಲ.
ಈಗಾಗಲೇ ಕೇಂದ್ರ ಓಬಿಸಿಯ ಪಟ್ಟಿನಲ್ಲಿ ಪಂಚಮಸಾಲಿಗಳನ್ನ ಸೇರಿಸಬೇಕು ಎನ್ನುವ ಪ್ರಸ್ತಾಪ ಮುಖ್ಯ ಕಾರ್ಯದರ್ಶಿಗಳ ಮುಂದಿದೆ. ಕೇಂದ್ರ ಸರಕಾರ ನಮ್ಮ ಮನವಿಯನ್ನು ಇಲ್ಲಿಗೆ ವರ್ಗಾಯಿಸಿದ್ದು ಅದರ ಬಗ್ಗೆಯೂ ನಿರಂತರ ಹೋರಾಟ ನಡೆಯಲಿದೆ ಎಂದು ಹೇಳಿದರು.