ಬಾಗಲಕೋಟೆ
ಮಗುವಿನ ಸರ್ವತೋಮುಖ ಅಭಿವೃದ್ಧಿಯೇ ಶಿಕ್ಷಣದ ಉದ್ದೇಶವಾಗಿದ್ದು ಪಠ್ಯ ಬೋಧನೆಯ ಜತೆ ಪಠ್ಯೇತರ ಚಟುವಟಿಕೆಗಳ ಪಾತ್ರವೂ ಮುಖ್ಯವಾಗಿದೆ ಎಂದು ಸೂಳೇಬಾವಿ ಗ್ರಾಪಂ ಅಧ್ಯಕ್ಷ ಪಿಡ್ಡಪ್ಪ ಕುರಿ ಹೇಳಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿಯ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಚಟುವಟಿಕೆ, ಶಾಲಾ ಸಂಸತ್ತು ಮತ್ತು ವೃತ್ತಿ ಕಲಿಕೋತ್ಸವದ ಪ್ರರ್ದಶನ ಕಾಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಿಂದ ಮಾತ್ರವೇ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ಸರಕಾರ ನೀಡುತ್ತಿರುವ ಸೌಲಭ್ಯಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕಿದೆ ಎಂದರು.
ಶಾಲಾ ಸಂಸತ್ತಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದ ಎಸ್ಡಿಎಂಸಿ ಅಧ್ಯಕ್ಷ ವಿರುಪಾಕ್ಷಪ್ಪ ಧೂಪದ, ನಮ್ಮ ದೇಶದ ಪ್ರಜಾಪ್ರಭುತ್ವ ಮಾದರಿಯ ಆಡಳಿತ ಜಗತ್ತಿನಲ್ಲಿಯೇ ವಿಶಿಷ್ಠವಾಗಿದೆ. ಸರ್ವರಿಗೂ ಸಮಪಾಲು ಸಮಬಾಳು ಎಂಬ ಆಶಯದ ತಳಹದಿಯ ಮೇಲೆ ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಭುವಾಗಬಹುದಾಗಿದೆ. ಸಂವಿಧಾನದ ಆಶಯಗಳನ್ನು ವಿದ್ಯಾರ್ಥಿ ಬಳಗಕ್ಕೆ ಪರಿಚಯಿಸುವ ವಿದ್ಯಾರ್ಥಿಗಳ ಸಂಸತ್ ರಚನೆ ಸ್ವಾಗತಾರ್ಹವಾಗಿದೆ ಎಂದು ಹೇಳೀದರು.
ಪ್ರಭಾರಿ ಉಪಪ್ರಾಚಾರ್ಯ ಎಚ್.ಎಂ.ಹಾಲನ್ನವರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಎಸ್ಡಿಎಂಸಿ ಸದಸ್ಯ ಕಾಶೀಂಸಾಬ ಬೂದಿಹಾಳ ಮಾತನಾಡಿದರು. ಬಸವರಾಜ ಚಂದ್ರಾಯಿ ಅತಿಥಿಗಳಾಗಿ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ೨೦೨೩-೨೦೨೪ನೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಬಸವ್ವ ಪಾಟೀಲ್, ಭುವನೇಶ್ವರಿ ಭಗವತಿ, ಅಶ್ವಿನಿ ಘಂಟಿ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಶಿಕ್ಷಕಿ ಪಿ.ಎಸ್.ಗಿರಿಯಪ್ಪನವರ, ಎಂ.ಎಸ್.ಅಂಗಡಿ, ಅಶೋಕ ಲಮಾಣಿ, ಶಾರದಾ ಬಿಸಲದಿನ್ನಿ ಇತರರಿದ್ದರು.