ಆಲಮಟ್ಟಿ: ಯುಗಾದಿ ಅಮಾವಾಸ್ಯೆ ವರ್ಷದ ಕೊನೆಯ ದಿನವಾದರೆ ಯುಗಾದಿ ಪಾಡ್ಯ ಹೊಸ ವರ್ಷದ ಮೊದಲ ದಿನ. ಹೀಗಾಗಿ ಹಬ್ಬದ ನಿಮಿತ್ತ ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶ ಹಾಗೂ ಮುಂಭಾಗದ ಕೃಷ್ಣಾ ನದಿಯ ಎರಡೂ ತೀರಗಳಲ್ಲಿ ನಾನಾ ದೇವರುಗಳ ಪಲ್ಲಕ್ಕಿಗಳ ವೈಭವ, ಭಕ್ತರ ಸಡಗರ ಶನಿವಾರ ಕಂಡು ಬಂತು.
ಯುಗಾದಿ ಅಮಾವಾಸ್ಯೆ ದಿನವಾದ ಶನಿವಾರ ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳು, ಪಲ್ಲಕ್ಕಿಗಳು, ಛತ್ರಿ, ಚಾಮರಗಳು, ಪೂಜಾ ಸಾಮಗ್ರಿಗಳನ್ನು ಶುಚಿಗೊಳಿಸಲು ಭಕ್ತರು ಜಿಲ್ಲೆಯ ಕೃಷ್ಣಾ ನದಿ ತೀರಕ್ಕೆ ಆಗಮಿಸಿದ್ದರು.
ಶನಿವಾರ ಬೆಳಗಾಗುತ್ತಿದ್ದಂತೆ ನದಿ ತೀರದಲ್ಲಿ ಡೊಳ್ಳು, ಜಾಗಟೆಯ ನಿನಾದ ಆರಂಭವಾಯಿತು. ನಾದಕ್ಕೆ ತಕ್ಕ ಹೆಜ್ಜೆ ಹಾಕುತ್ತಾ ಪಲ್ಲಕ್ಕಿ ಹೊತ್ತ ಭಕ್ತ ಸಾಗರ ದೌಡಾಯಿಸಿ ಆಗಮಿಸುತ್ತಿದ್ದರು. ನೋಡ ನೋಡುತ್ತಿದ್ದಂತೆ ದೇವಾನು ದೇವತೆಗಳು ನೆರೆದರು. ಪುಣ್ಯಸ್ನಾನ ಮಾಡಿದ ಭಕ್ತರು ದೇವರ ಮೂರ್ತಿಗಳನ್ನು ಕೃಷ್ಣಯಲ್ಲಿ ಮಿಂದಳಿಸಿದರು.
ನಾನಾ ದೇವರ ಉತ್ಸವಮೂರ್ತಿ, ಪಲ್ಲಕ್ಕಿ, ಚೌಕಿ, ಛತ್ರಿ ಚಾಮರ, ಕಳಸಗಳ ಸ್ವಚ್ಛತೆ, ಪೂಜೆ ಪುನಸ್ಕಾರ, ನೈವೇದ್ಯ, ಭಕ್ತರ ಸಾಮೂಹಿಕ ಭೋಜನ ನಂತರ ಡೊಳ್ಳು ಕುಣಿತ, ಹಲಗೆ ವಾದನ, ಕಹಳೆ ನಾದದೊಂದಿಗೆ ಅದ್ದೂರಿ ಮೆರವಣಿಗೆ ನಡೆಸುವುದು ಕಂಡು ಬಂತು.
ಚಂದ್ರಗಿರಿ, ಸೀತಿಮನಿ, ಅರಳದಿನ್ನಿ ಸೇರಿದಂತೆ ಕೃಷ್ಣಾನದಿ ತೀರದ ನಾನಾ ಗ್ರಾಮಗಳಲ್ಲಿ ಈ ಸಂಭ್ರಮ ಸಾಮಾನ್ಯವಾಗಿತ್ತು.
ದೇವತೆಗಳು
ಅವಳಿ ಜಿಲ್ಲೆಯ ನಾನಾ ಗ್ರಾಮಗಳಿಂದ ಆಗಮಿಸಿದ ಭಕ್ತರು ಶಿವ, ಪಾರ್ವತಿ, ಮಹಾಕಾಳಿ ಸೇರಿದಂತೆ ನಾನಾ ದೇವರ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ತಂದಿದ್ದರು. ಹೀಗೆ ತಂದ ದೇವರ ಮೂರ್ತಿಗಳನ್ನು ನಿಂದೆ, ಹುಣಸೆಹಣ್ಣು, ಪೀತಾಂಬರ ಸೇರಿದಂತೆ ನಾನಾ ವಸ್ತುಗಳಿಂದ ತೊಳೆದು ಸ್ವಚ್ಛಗೊಳಿಸಿದರು. ಭಕ್ತರು ಮಡಿಯಿಂದ ದೇವರುಗಳನ್ನು ಪಲ್ಲಕ್ಕಿಯಲ್ಲಿ ಅಲಂಕರಿಸಿ, ನೈವೇದ್ಯ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ನಂತರ ಮರಳಿ ದೇವರನ್ನು ತೆಗೆದುಕೊಂಡು ಹೋಗುವ ವೇಳೆ ಭಂಡಾರ ಎರಚಿ ಭಕ್ತಿ ಪ್ರದರ್ಶಿಸಿದರು.
ಬಹುತೇಕ ಭಕ್ತರು ಟ್ರ್ಯಾಕ್ಟರ್. ಆಟೋ, ಗೂಡ್ಸ್ ವಾಹನಗಳು ಎತ್ತಿನ ಬಂಡಿಗಳಲ್ಲಿ ಆಗಮಿಸಿದ್ದರು. ಸಮೀಪದ ಗ್ರಾಮಸ್ಥರು ಪಲ್ಲಕ್ಕಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದಿದ್ದರು.