ಬೆಂಗಳೂರು: ಇಲ್ಲಿ ನಿರಂತರವಾಗಿ ಬಿಸಿಲ ಬೇಗೆ ಹೆಚ್ಚುತ್ತಲೇ ಇದ್ದು, ಜನರನ್ನು ಹೈರಾಣಾಗಿಸಿದ್ದು, ರಜೆ ದಿನವಾದ ಭಾನುವಾರವೂ ಧಗೆ ಹೆಚ್ಚಾಗಿ ಜನ ಫುಲ್ ಸುಸ್ತಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಭಾನುವಾರ ಸಿಲಿಕಾನ್ ಸಿಟಿಯಲ್ಲಿ ದಾಖಲೆಯ 38.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ರಾಜಧಾನಿಯಲ್ಲಿ ಏಪ್ರಿಲ್ ತಿಂಗಳಲ್ಲಿ ದಾಖಲಾದ ಎರಡನೇ ಅತಿ ಹೆಚ್ಚು ಹಾಗೂ ಒಟ್ಟಾರೆ ಮೂರನೇ ಅತಿ ಹೆಚ್ಚು ತಾಪಮಾನವಾಗಿದೆ.
ಕಳೆದ ಒಂದು ವಾರದಿಂದಲೂ ನಗರದಲ್ಲಿ ತಾಪಮಾನ ಏರುತ್ತಲೇ ಇದೆ. ಏಪ್ರಿಲ್22 ರಂದು 37.2 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ತಾಪಮಾನ, ಏಪ್ರಿಲ್27 ರಂದು 38 ಡಿಗ್ರಿ ಸೆಲ್ಸಿಯಸ್ ಹಾಗೂ ಏಪ್ರಿಲ್ 28 ರಂದು 38.5 ಡಿಗ್ರಿ ಸೆಲ್ಸಿಯಸ್ ತಲುಪಿತ್ತು.
ಬೆಳಗ್ಗೆ 8 ಗಂಟೆಗೆ ಮನೆಯಿಂದ ಹೊರ ಬರಲಾರದಷ್ಟು ಬಿಸಿಲು ಬರುತ್ತಿದೆ. ತಾಪಮಾನ ಹೆಚ್ಚಳದಿಂದ ಜನರಲ್ಲಿ ಚರ್ಮ ವ್ಯಾಧಿ, ಮೈಗ್ರೇನ್, ಅತಿಸಾರ, ವಾಂತಿ ಭೇದಿ, ಡ್ರೈ ಐ, ತಲೆಸುತ್ತು, ಅಪಸ್ಮಾರದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ.
ಮನೆಯಿಂದ ಕೆಲಸಕ್ಕೆ ಹೊರ ಹೋಗುವ ಹೆಚ್ಚಿನ ಜನರು ದ್ವಿಚಕ್ರವಾಹನದ ಬದಲಿಗೆ ಕಾರು, ಮೆಟ್ರೋ ಬಳಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿಸಾಕಷ್ಟು ಏರಿಕೆಯಾಗಿದ್ದು, ಬಿಸಿಲಿನ ಹೆಚ್ಚಳವೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೂ ರಸ್ತೆಗಳಲ್ಲಿ ವಾಹನ ದಟ್ಟಣೆ ಕೂಡ ಸಾಕಷ್ಟು ತಗ್ಗಿದೆ. ಇನ್ನು, ಕಲ್ಲಂಗಡಿ, ಕರಬೂಜ, ಕಿತ್ತಳೆ ಹಣ್ಣು ಖರೀದಿ ಜೋರಾಗಿದ್ದು, ಜ್ಯೂಸ್ ಅಂಗಡಿಗಳಲ್ಲಂತೂ ಕಾಲು ಹಾಕದಷ್ಟು ಜನರಿರುತ್ತಾರೆ. ಐಸ್ ಕ್ರೀಂ ದರ ಕೂಡ ಹೆಚ್ಚಾಗಿದೆ.
2016 ಏಪ್ರಿಲ್ 25 ರಂದು ನಗರದಲ್ಲಿ 39.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದಕ್ಕೂ ಪೂರ್ವದಲ್ಲಿ 1931 ಮೇ 22 ರಂದು 38.9 ಹಾಗೂ 1931 ರ ಏಪ್ರಿಲ್ 30ರಂದು 38.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.