ಪತ್ನಿ ಮುನಿಸಿನ ಮಧ್ಯೆ ಸಭೆ ಕರೆದ ಪತಿ
ಬಾಗಲಕೋಟೆ
ಪತ್ನಿ ಮುನಿಸಿನ ಮಧ್ಯೆಯೂ ಪತಿ, ಶಾಸಕ ವಿಜಯಾನಂದ ಕಾಶಪ್ಪನವರ ಏ.೯ರಂದು ಕಾರ್ಯಕರ್ತರ ಸಭೆ ಕರೆದಿದ್ದು ಕುತೂಹಲ ಮೂಡಿಸಿದೆ.
ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಈವರೆಗೂ ಪಕ್ಷದ ಮುಖಂಡರೊಂದಿಗೆ ಮುನಿಸಿಕೊಂಡಿದ್ದಾರೆ. ತಮಗೆ ಟಿಕೆಟ್ ಕೈ ತಪ್ಪಲು ಜಿಲ್ಲೆಯ ಶಾಸಕರು ಪ್ರಮುಖ ಕಾರಣರಾಗಿದ್ದರೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.
ಈ ಮಧ್ಯೆ ಪಕ್ಷ ಟಿಕೆಟ್ ಕೊಡದೆ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಅವರ ಪತ್ನಿ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಇಬ್ಬರೂ ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರದಲ್ಲಿ ತಮ್ಮ ಅಸಮಾಧಾನದಿಂದ ಸಮಾಧಾನಗೊಂಡ ಶಾಸಕ ವಿಜಯಾನಂದ ಕಾಶಪ್ಪನವರ ಜಿಲ್ಲಾ ಮಟ್ಟದಲ್ಲಿ ನಡೆದ ಮುಖಂಡರ ಸಭೆಗೆ ಹಾಜರಾಗಿ ಎಲ್ಲವೂ ಸರಿ ಹೋಗಿದೆ. ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಒಗ್ಗಟ್ಟಾಗಿ ಶ್ರಮಿಸುತ್ತೇವೆ ಎಂದು ಹೇಳಿದ್ದರು.
ಈ ಮಾತು ಟಿಕೆಟ್ ದೊರೆಯದೆ ಅಸಮಾಧಾನಗೊಂಡಿದ್ದ ವೀಣಾ ಅವರನ್ನು ಕೆರಳಿಸಿತ್ತು. ಹೀಗಾಗಿ ಬಾಗಲಕೋಟೆಯಲ್ಲಿ ತಮ್ಮ ಅಭಿಮಾನಿಗಳು, ಬೆಂಬಲಿಗರ ಸಭೆ ಕರೆದು ತಮ್ಮ ತಟಸ್ಥ ನಿಲುವು ಮುಂದುವರೆದಿದ್ದು ಯುಗಾದಿ ನಂತರ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದರು.
ಇವರಿಬ್ಬರ ಗೊಂದಲದ ಹೇಳಿಕೆಯಿಂದ ಹುನಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಮಂಕು ಕವಿದಂತಾಗಿತ್ತು. ಜತೆಗೆ ಏ.15 ರಂದು ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರು ಹುನಗುಂದ ಕ್ಷೇತ್ರದ ಕಾರ್ಯಕರ್ತರ ಸಮಾವೇಶಕ್ಕೆ ಸಿದ್ಧರಾಗಿದ್ದು ಕ್ಷೇತ್ರದಲ್ಲಿ ಪ್ರಚಾರ ಚುರುಕು ಪಡೆಯುವ ಸಾಧ್ಯತೆ ಇದೆ.
ಹೀಗಾಗಿ ಇವೆಲ್ಲ ಗೊಂದಲ ನಿವಾರಣೆಗೆ ಜತೆಗೆ ಕಾರ್ಯಕರ್ತರಲ್ಲಿ ಚುನಾವಣೆ ರಣಕಹಳೆ ಮೊಳಗಿಸಲು ಇದೀಗ ಶಾಸಕ ವಿಜಯಾನಂದ ಕಾಶಪ್ಪನವರ ಏ.9 ರಂದು ಸಭೆ ಕರೆದಿದ್ದಾರೆ.
ಆತ್ಮೀಯರೇ
*ದಿನಾಂಕ:-09-04-2024* *ಮಂಗಳವಾರ* ದಂದು *ಬೆಳಿಗ್ಗೆ:-09:30ಕ್ಕೆ* *ಇಳಕಲ್* ನಗರದ ಗೃಹ ಕಚೇರಿ *ಎಸ್ ಆರ್ ಕೆ ನಿಲಯದಲ್ಲಿ*
*ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯನ್ನು* ಹುನಗುಂದ ಮತಕ್ಷೇತ್ರ ಜನಪ್ರಿಯ ಶಾಸಕರು, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ *ಶ್ರೀ ವಿಜಯಾನಂದ ಎಸ್ ಕಾಶಪ್ಪನವರ* ಅವರ ಅಧ್ಯಕ್ಷತೆಯಲ್ಲಿ *ಪೂರ್ವಭಾವಿ ಹಮ್ಮಿಕೊಳ್ಳಲಾಗಿದೆ*.
ಆದ ಕಾರಣ ಜಿಲ್ಲಾ ಪಂಚಾಯತ್,ತಾಲೂಕಾ ಪಂಚಾಯತ್, ಗ್ರಾಮ ಪಂಚಾಯತ್ ಹಾಲಿ ಮತ್ತು ಮಾಜಿ ಸದಸ್ಯರು, ಇಳಕಲ್ ನಗರಸಭೆ, ಹುನಗುಂದ ಪುರಸಭೆ, ಕಾಂಗ್ರೆಸ್ ಪಕ್ಷದ ಸದಸ್ಯರು,ಪಿಕೆಪಿಎಸ್ ನಿರ್ದೇಶಕರು, *ಇಳಕಲ್-ಹುನಗುಂದ ಬ್ಲಾಕ್ ಕಾಂಗ್ರೆಸ್*, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ವಿಧ್ಯಾರ್ಥಿ ಕಾಂಗ್ರೆಸ್, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗ ಸೇರಿದಂತೆ ಎಲ್ಲಾ ಮುಂಚೂಣಿಯ ಘಟಕಗಳ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, *ಬೂತ್ ಮಟ್ಟದ ಅಧ್ಯಕ್ಷರು* ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪಕ್ಷದ ಅಭಿಮಾನಿಗಳು *ತಪ್ಪದೇ ಭಾಗವಹಿಸಬೇಕೆಂದು ತಮ್ಮಲ್ಲಿ ವಿನಂತಿ*….
ಎಂದು ಗ್ರುಪ್ ಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇವರ ಸಭೆ ನಂತರ ವೀಣಾ ಕಾಶಪ್ಪನವರ ಪಕ್ಷದ ಪರ ಪ್ರಚಾರಕ್ಕಿಳಿಯುತ್ತಾರೋ ಅಥವಾ ತಮ್ಮ ತಟಸ್ಥ ಧೋರಣೆ ಮುಂದುವರೆಸುತ್ತಾರೋ ಕಾದು ನೋಡಬೇಕಿದೆ.