ಬೆಂಗಳೂರು: ಮಹಿಳೆಯನ್ನು ಚುಡಾಯಿಸಿದ್ದಲ್ಲದೆ, ಪ್ರಶ್ನಿಸಿದ ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಅಪರಾಧಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 3 ವರ್ಷಗಳ ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಮಂಡ್ಯ ಜಿಲ್ಲೆಯ ಬೆಸ್ತರಕೊಪ್ಪಲು ಗ್ರಾಮದ ಎಚ್.ಸಿ. ಚಿಕ್ಕರಾಜು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ವೆಂಕಟೇಶ್ ನಾಯ್ಕ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
ನಂಜೇಗೌಡನ ಕೊಪ್ಪಲು ಗ್ರಾಮದ ವಿವಾಹಿತ ಮಹಿಳೆಗೆ ಆರೋಪಿ ಬೆಸ್ತರಕೊಪ್ಪಲು ನಿವಾಸಿ ಕೆ.ಸಿ. ಸಿಕ್ಕರಾಜು ವಿನಾಕಾರಣ ಕಿರುಕುಳ ನೀಡುವುದು, ಅವರು ಎಲ್ಲಿ ಹೋದರೂ ಹಿಂದೆ ಹೋಗುವುದು, ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು. ಆ ಮಹಿಳೆ ಕೆಲ ದಿನಗಳ ಬಳಿಕ ಪತಿಗೆ ವಿಷಯ ತಿಳಿಸಿದ್ದರು. 2013 ರ ಆಗಸ್ಟ್ 13 ರಂದು ದೂರುದಾರ ಮಹಿಳೆ ಮತ್ತು ಆಕೆಯ ಪತಿ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಆರೋಪಿ ಬಂದಿದ್ದನು.
ಪತಿ ಆರೋಪಿಯ ನಡೆಯನ್ನು ಪ್ರಶ್ನಿಸಿದ್ದರು. ಇದರಿಂದ ಸಿಟ್ಟಾದ ಆರೋಪಿ ತಕ್ಷಣ ಮಹಿಳೆ ಮತ್ತವರ ಗಂಡನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ದೊಣ್ಣೆಯಿಂದ ಹೊಡೆದು ಎದೆಭಾಗ ಮತ್ತು ಮೊಣಕಾಲಿನ ಮೇಲೆ ಹೊಡೆದು ಗಾಯಗೊಳಿಸಿದ್ದ. ಪತಿಯ ರಕ್ಷಣೆಗೆ ಬಂದ ಮಹಿಳೆಯ ಸೀರೆ ಹಿಡಿದು ಎಳೆದಾಡಿ ಗಂಡನನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದ್ದ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ವಿರುದ್ಧ ತನಿಖೆ ನಡೆಸಿ ಐಪಿಸಿಯ ವಿವಿಧ ಕಾಲಂಗಳ ಅಡಿಯಲ್ಲಿಆರೋಪಪಟ್ಟಿ ಸಲ್ಲಿಸಿದ್ದರು.
ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳಿಂದ ಆರೋಪಿ ಮಹಿಳೆಯ ಸೀರೆ ಎಳೆದು ಬೆತ್ತಲೆಗೊಳಿಸಲು ಪ್ರಯತ್ನಿಸಿರುವುದು, ಅವರಿಗೆ ದೊಣ್ಣೆಯಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುವುದು, ಉದ್ದೇಶಪೂರ್ವಕವಾಗಿ ಅಪಮಾನ ಮಾಡಿರುವ ಅಂಶಗಳು ದೃಢಪಟ್ಟಿವೆ. ಹಾಗಾಗಿ, ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯಲ್ಲಿ ಯಾವುದೇ ದೋಷ ಕಂಡು ಬರುತ್ತಿಲ್ಲಎಂದು ಪೀಠ ಹೇಳಿದೆ.