ಬೆಂಗಳೂರು: ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಮುಖ್ಯದ್ವಾರದ ಮೇಲೆ ರಾಷ್ಟ್ರಕವಿ ಕುವೆಪು ಅವರ ಪದ್ಯವೊಂದರ ಘೋಷವಾಕ್ಯ, ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಸಾಲನ್ನು ಬದಲಿಸಿ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಅಂತ ಬದಲಿಸಿದ್ದು ಸರಿಯಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಬೆಂಗಳೂರಲ್ಲಿ ತಿಳಿಸಿದರು.
ಇವು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ಶಾಲೆಗಳಾಗಿದ್ದು ಕವನದ ಸಾಲನ್ನು ಯಾವ ಕಾರಣಕ್ಕಾಗಿ ಬದಲಾಯಿಸಿದ್ದಾರೋ ಗೊತ್ತಿಲ್ಲ, ಸಂಬಂಧಪಟ್ಟ ಸಚಿವರೊಂದಿಗೆ ಮಾತಾಡುವುದಾಗಿ ಬಂಗಾರಪ್ಪ ಸೂಚಿಸಿದರು.
ರಾಷ್ಟ್ರಕವಿ ಕುವೆಂಪು ಅವರನ್ನು ಅವಮಾನಿಸುವ ಪ್ರಶ್ನೆಯೇ ಉದ್ಭವಿಸಲ್ಲ, ನಮ್ಮ ಪ್ರಣಾಳಿಕೆಯನ್ನು ಅವರ ಸರ್ವಜನಾಂಗದ ಶಾಂತಿಯ ತೋಟ ಎಂಬ ಸಾಲಿನೊಂದಿಗೆ ಆರಂಭಿಸಿದ್ದೇವೆ ಎಂದು ಹೇಳಿದ ಸಚಿವ, ಜ್ಞಾನ ದೇಗುಲವಿದು ಕೈ ಮುಗಿದು ಒಳಬಂದು ಧೈರ್ಯವಾಗಿ ಪ್ರಶ್ನಿಸಿ ಎಂದು ವಾಕ್ಯವನ್ನು ಬದಲಿಸಿದ್ದರೆ ಚೆನ್ನಾಗಿರುತಿತ್ತು ಮತ್ತು ಹಾಗೆ ಮಾಡಿದ್ದರೆ ಡಾ ಬಿಅರ್ ಅಂಬೇಡ್ಕರ್ ಅವರಿಗೂ ಗೌರವ ಸಲ್ಲಿಸಿದಂತಾಗುತಿತ್ತು ಎಂದು ಹೇಳಿದರು.
ಕುವೆಂಪು ಪದ್ಯದ ಸಾಲು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್-ಎಲ್ಲ ಸಮುದಾಯಗಳಿಗೂ ಅನ್ವಯವಾಗುವಂಥದ್ದು, ಯಾರಿಗೂ ಈ ಸಾಲಿನ ಬಗ್ಗೆ ತಕರಾರಿಲ್ಲ ಎಂದು ವಿವರಿಸಿದರು.