ನವದೆಹಲಿ: ಭಾರತದ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳೆಲ್ಲವೂ ಸೋಮವಾರ ವಿಜೃಂಬಿಸುತ್ತಿವೆ. ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕ ದಾಖಲೆಯ ಮಟ್ಟಕ್ಕೆ ಏರಿವೆ. ಬಿಎಸ್ಇಯ 30 ಷೇರುಗಳ ಸೆನ್ಸೆಕ್ಸ್ ಶೇ. 3.5ರವರೆಗೆ ಏರಿ 76,583 ಅಂಕಗಳ ಮಟ್ಟ ತಲುಪಿತ್ತು. ಇದು ಬಿಎಸ್ಇ ಇತಿಹಾಸದಲ್ಲೇ ಸೆನ್ಸೆಕ್ಸ್ ಸೂಚ್ಯಂಕ ತಲುಪಿದ ಗರಿಷ್ಠ ಎತ್ತರ.
ಇವತ್ತು ಏರಿಕೆಯಾದ ಪ್ರಮುಖ ಸ್ಟಾಕುಗಳಲ್ಲಿ ಪವರ್ ಗ್ರಿಡ್, ಎಲ್ ಅಂಡ್ ಟಿ, ಎನ್ಟಿಪಿಸಿ, ಎಸ್ಬಿಐ, ಎಕ್ಸಿಸ್ ಬ್ಯಾಂಕ್, ಮಹೀಂದ್ರ ಅಂಡ್ ಮಹೀಂದ್ರ, ಐಸಿಐಸಿಐ ಬ್ಯಾಂಕ್ ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಉತ್ತಮ ಬೆಲೆ ಪಡೆದುಕೊಂಡಿವೆ.
ಏಷ್ಯನ್ ಪೇಂಟ್ಸ್, ಏಚರ್ ಮೋಟಾರ್ಸ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಬಯೋಕಾನ್, ಫೋರ್ಟಿಸ್ ಹೆಲ್ತ್, ಗ್ಲ್ಯಾಂಡ್, ಎಲ್ ಅಂಡ್ ಟಿ ಟೆಕ್ನಾಲಜಿ ಹೀಗೆ ಬೆರಳಣಿಕೆಯಷ್ಟು ಸ್ಟಾಕುಗಳು ಮಾತ್ರ ನಷ್ಟ ಕಂಡಿವೆ. ಉಳಿದಂತೆ ಬಹುತೇಕ ಷೇರುಗಳು ಬೇಡಿಕೆ ಪಡೆದಿರುವುದು ಗಮನಾರ್ಹವೆನಿಸಿದೆ. ಕಳೆದ ವಾರ ಕಂಡ ಇಳಿಕೆಯನ್ನು ಮೀರಿಸಿ ಇಂದು ಸೋಮವಾರ ಷೇರುಗಳು ಓಡಿವೆ.
ನಾಳೆ, ಮಂಗಳವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಎನ್ಡಿಎ ಮೈತ್ರಿಕೂಟವೇ ಮತ್ತೆ ಸರ್ಕಾರ ರಚನೆ ಮಾಡುವಂತಾದರೆ ಷೇರು ಮಾರುಕಟ್ಟೆ ಇನ್ನಷ್ಟು ಏರಬಹುದು. ಬಜೆಟ್ನಲ್ಲಿ ನಡೆಯುವ ಘೋಷಣೆಗಳು ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಬಹುದು.
ಮೊನ್ನೆ ಶನಿವಾರ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿದ್ದವು. ಹೆಚ್ಚಿನ ಸಮೀಕ್ಷೆಗಳು ಎನ್ಡಿಎಗೆ ಬಹುಮತ ಬರಬಹುದು ಎನ್ನುವ ಸುಳಿವು ನೀಡಿವೆ.
ಅದಕ್ಕೂ ಹಿಂದಿನ ಒಂದೆರಡು ವಾರಗಳಿಂದ ಷೇರು ಮಾರುಕಟ್ಟೆ ತುಮುಲದ ಸ್ಥಿತಿಯಲ್ಲಿತ್ತು. ಎನ್ಡಿಎ ಮೈತ್ರಿಕೂಟ 300 ಸೀಟುಗಳ ಒಳಗೆ ಗೆಲ್ಲಬಹುದು ಎನ್ನುವ ವದಂತಿಗಳಿದ್ದವು. ಈ ಕಾರಣಕ್ಕೆ ಷೇರು ಮಾರುಕಟ್ಟೆ ನಕಾರಾತ್ಮಕವಾಗಿ ವರ್ತಿಸುತ್ತಿದೆ ಎಂಬುದು ವಿಶ್ಲೇಷಕರ ಅನಿಸಿಕೆ. ಈಗ ಎಕ್ಸಿಟ್ ಪೋಲ್ಗಳು ಎನ್ಡಿಎಗೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆಯನ್ನು ತೋರಿಸಿವೆ. ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಸಕಾರಾತ್ಮಕವಾಗಿ ವರ್ತಿಸುತ್ತಿರಬಹುದು ಎಂದೆನ್ನಲಾಗುತ್ತಿದೆ.
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ 50 ಷೇರುಗಳ ನಿಫ್ಟಿ50 ಸೂಚ್ಯಂಕ ಕೂಡ 807 ಅಂಕಗಳಷ್ಟು ಏರಿ 23,337 ಮಟ್ಟ ತಲುಪಿದೆ. ಷೇರು ಮಾರುಕಟ್ಟೆ ಈ ಪರಿ ಗರಿಗೆದರಲು ಎಕ್ಸಿಟ್ ಪೋಲ್ ಫಲಿತಾಂಶ ಕಾರಣ ಇರಬಹುದು. ಇದರೊಂದಿಗೆ ಎನ್ಡಿಎ ಮೈತ್ರಿಕೂಟ ಸತತ ಮೂರನೇ ಬಾರಿ ಅಧಿಕಾರಕ್ಕೆ ಬರುವ ಇರಾದೆಯಲ್ಲಿ ಮಾರುಕಟ್ಟೆ ಇದೆ ಎನ್ನುವಂತಿದೆ.