ಬಾಗಲಕೋಟೆ:ದುಷ್ಕರ್ಮಿಗಳಿಂದ ಮಾರಣಾಂತಿಕ ದಾಳಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ರೈತಪರ ಹೋರಾಟಗಾರ ಯಲ್ಲಪ್ಪ ಹೆಗಡೆ ಅವರ ಆರೋಗ್ಯದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ವಿಚಾರಿಸಿದರು.
ನಗರದ ವಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೆಗಡೆ ಅವರನ್ನು ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯದ ಕುರಿತು ಮಾಹಿತಿ ಪಡೆದರು.
ಹಲ್ಲೆಗೊಳಗಾದ ಘಟನೆ ಕುರಿತು ಯಲ್ಲಪ್ಪ ಹೆಗಡೆ ಎಳೆಎಳೆಯಾಗಿ ಸಚಿವರ ಮುಂದೆ ಬಿಚ್ಚಿಟ್ಟರು. ಯಾರು ಈ ಘಟನೆಗೆ ಮೂಲ ಕಾರಣರಾಗಿದ್ದಾರೋ ಅಂತವರಿಗೆ ಸೂಕ್ತ ಶಿಕ್ಷೆ ಆಗಬೇಕು. ಅಮಾಯಕರನ್ನು ಬಂಧಿಸಿದರೆ ಪರಿಸ್ಥಿತಿ ಸರಿಯಾಗುವುದಿಲ್ಲ. ಅದರ ಹಿಂದಿನ ಪಟ್ಟಭದ್ರ ಹಿತಾಸಕ್ತಿಗಳು, ಷಡ್ಯಂತ್ರ, ಸಂಚು ಹೂಡಿದವರಿಗೆ ತಕ್ಕಶಿಕ್ಷೆ ಆಗಬೇಕು. ಆಗ ಮಾತ್ರ ನ್ಯಾಯದ ಮೇಲೆ ಜನಸಾಮಾನ್ಯರಿಗೆ ನಂಬಿಕೆ ಬರುತ್ತದೆ ಎಂದು ಹೇಳಿದರು.
ನಂತರ ಮಾತನಾಡಿದ ಸಚಿವರು, ಹೋರಾಟಗಾರರಿಗೆ ಈ ರೀತಿಯ ಹಲ್ಲೆ ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಸಹಜ. ಅದನ್ನು ಅದೇ ರೀತಿಯಲ್ಲಿ ಉತ್ತರಿಸಬೇಕೆ ಹೊರತು ಇಂತಹ ಕಾರ್ಯಕ್ಕೆ ಕೈ ಹಾಕಬಾರದು. ಘಟನೆಗೆ ಸಂಬAಧಿಸಿದAತೆ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು ಯಾರನ್ನು ರಕ್ಷಿಸುವ ಪ್ರಮೆಯ ಬರುವುದಿಲ್ಲ ಎಂದು ತಿಳಿಸಿದರು.