ವನ್ಯಜೀವಿಗಳನ್ನು ಅವುಗಳ ಸಹಜ ಆವಾಸ ಸ್ಥಾನದಲ್ಲಿ ನೋಡುವುದೇ ಚಂದ. ಅವುಗಳ ಜೀವನಕ್ರಮ, ಅದ್ಭುತ ನೋಟ ಎಲ್ಲವೂ ರೋಮಾಂಚಕಾರಿ ಅನುಭವ ತರುತ್ತದೆ. ಕೆಲವೊಮ್ಮೆ ಇವುಗಳ ಬಲು ಅಪರೂಪದ ದೃಶ್ಯಗಳೂ ಕಣ್ಣಿಗೆ ಕಾಣಸಿಗುತ್ತವೆ. ಸಹಜವಾಗಿಯೇ ಇಂತಹ ದೃಶ್ಯಗಳು ನಮ್ಮ ಕುತೂಹಲವನ್ನೂ ಹೆಚ್ಚಿಸುತ್ತವೆ. ಸದ್ಯ ಅಂತಹದ್ದೊಂದು ವಿಡಿಯೋ ವೈರಲ್ ಆಗುತ್ತಿದೆ.
ಹುಲಿಗಳ ನೋಟವೇ ಚೆಂದ. ಹುಲಿಗಳು ಗಾಂಭೀರ್ಯದಿಂದ ಹೆಜ್ಜೆ ಇಡುತ್ತಾ ಬರುವ ದೃಶ್ಯವೂ ಸುಂದರ. ಬೇಟೆಯಲ್ಲಿ ಪಳಗಿರುವ ಹುಲಿಗಳ ಇತರ ಕೌಶಲ್ಯಗಳೂ ಅದ್ಭುತ. ಅವಶ್ಯಕತೆ ಇದ್ದಲ್ಲಿ ಹುಲಿಗಳು ಒಂದಷ್ಟು ಅಂತರವನ್ನು ಅದ್ಭುತವಾಗಿ ಜಂಪ್ ಮಾಡುವ ಸಾಮರ್ಥ್ಯವನ್ನೂ ಹೊಂದಿವೆ. ಅದಕ್ಕೆ ಸಾಕ್ಷಿ ಈ ದೃಶ್ಯ. ಸದ್ಯ ಹುಲಿಯೊಂದು ಅದ್ಭುತವಾಗಿ ಲಾಂಗ್ ಜಂಪ್ ಮಾಡುವ ವಿಡಿಯೋವೊಂದು ಎಲ್ಲರ ಗಮನ ಸೆಳೆಯುತ್ತಿದೆ.
ಎಕ್ಸ್ (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 12 ಸೆಕೆಂಡಿನ ವಿಡಿಯೋ ಕ್ಲಿಪ್ ಇದು. ಜೌಗು ಪ್ರದೇಶದಲ್ಲಿ ಹುಲಿಯೊಂದು ಹೆಜ್ಜೆ ಇಡುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ಬರುವ ಹುಲಿ ಅದ್ಭುತವಾಗಿ ಜಂಪ್ ಮಾಡಿ ನೀರಿನಿಂದ ತಪ್ಪಿಸಿ ಇನ್ನೊಂದು ಬದಿಗೆ ಹೋಗಿದೆ. ಈ ದೃಶ್ಯವೇ ರೋಮಾಂಚನಕಾರಿಯಾಗಿದೆ. ಪಶ್ಚಿಮ ಬಂಗಾಳದ ಸುಂದರಬನ್ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಯಾದ ದೃಶ್ಯವಿದು. ಈ ಅಂತರವನ್ನು ಹಾರುವ ಹುಲಿಯ ಕೌಶಲ್ಯವನ್ನು ಮೆಚ್ಚಲೇಬೇಕು. ಒಂದು ಕ್ಷಣ ಹುಲಿ ಗಾಳಿಯಲ್ಲಿ ತೇಲಿದಂತೆ ಭಾಸವಾದರೂ ಅಚ್ಚರಿಯೇನೂ ಇಲ್ಲ. `ಸುಂದರಬನದಲ್ಲಿ ಒಮ್ಮೆ ಮಾತ್ರ ನೋಡಬಹುದಾದ ನೋಟ’ ಎಂಬ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಆರಂಭದಲ್ಲಿ ವನ್ಯಜೀವಿ ಛಾಯಾಗ್ರಾಹಕ ಹರ್ಷಲ್ ಮಾಲ್ವಂಕರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಇದೀಗ ಈ ವಿಡಿಯೋ ಬೇರೆ ಬೇರೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದೆ.
ಈ ವಿಡಿಯೋ ಸಹಜವಾಗಿಯೇ ನೆಟ್ಟಿಗರ ಗಮನ ಸೆಳೆದಿದೆ. ಪ್ರಾಣಿಪ್ರಿಯರು ಬಲು ಆಸಕ್ತಿಯಿಂದಲೇ ಈ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ ಹಾಗೂ ಹುಲಿಯ ಕೌಶಲ್ಯವನ್ನು ಮೆಚ್ಚಿ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದಾರೆ. ಈ ನದಿಯಲ್ಲಿ ಮೊಸಳೆಗಳಿವೆ. ಇದರಿಂದ ಪಾರಾಗಲು ಹುಲಿ ಹೀಗೆ ಅದ್ಭುತವಾಗಿ ಜಂಪ್ ಮಾಡಿದೆ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ. ನಿಮಗೆ ಕೂಡಾ ಈ ದೃಶ್ಯ ಖುಷಿ ನೀಡಿರಬಹುದು.