ಬೆಂಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಹುದ್ದೆಗೆ ನೇಮಿಸಲಾಗಿದ್ದ ಮಾಜಿ ಎಂಎಲ್‌ಸಿ ಅಬ್ದುಲ್ ಅಜೀಂ ಅವರ ನಾಮ ನಿರ್ದೇಶನ ಹಿಂಪಡೆದಿರುವ ರಾಜ್ಯ ಸರಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.
”ಖುಸ್ರೋ ಖುರೇಷಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿರುವ ನ್ಯಾಯಪೀಠ, ಅಲ್ಪಸಂಖ್ಯಾತ ಆಯೋಗದ ಸೆಕ್ಷನ್ 4ರ ಪ್ರಕಾರ ಆಯೋಗದ ಅಧ್ಯಕ್ಷರನ್ನು ನೇಮಕ ಮತ್ತು ರದ್ದು ಮಾಡುವುದು ಸರಕಾರದ ವಿವೇಚನೆಗೆ ಬಿಟ್ಟಿದ್ದು. ಆದ್ದರಿಂದ ಶಾಸನದ ಅನುಸಾರ ಸರಕಾರದ ಆದೇಶ ಕಾನೂನು ಬಾಹಿರವಾಗುವುದಿಲ್ಲ. ಅರ್ಜಿದಾರರ ಯಾವುದೇ ಹಕ್ಕು ಕಸಿದುಕೊಂಡಂತಾಗುವುದಿಲ್ಲ,” ಎಂದು ನ್ಯಾಯಪೀಠ ತಿಳಿಸಿದೆ.
ತಮ್ಮ ನಾಮ ನಿರ್ದೇಶನ ವಾಪಸ್ ಪಡೆದಿದ್ದ ಕ್ರಮ ಪ್ರಶ್ನಿಸಿ ಅಬ್ದುಲ್ ಅಜೀಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
”ಸರಕಾರದ ಅಧೀನದಲ್ಲಿರುವ ಆಯೋಗಗಳಿಗೆ ಅಧ್ಯಕ್ಷರನ್ನು ನಾಮ ನಿರ್ದೇಶನ ಮಾಡುವುದು ಮತ್ತು ವಾಪಸ್ ಪಡೆಯುವುದು ಸರಕಾರದ ವಿವೇಚನೆಗೆ ಒಳಪಟ್ಟಿರಲಿದ್ದು, ಈ ಪ್ರಕ್ರಿಯೆಯಲ್ಲಿ ನೋಟಿಸ್ ನೀಡದೆ ಏಕಪಕ್ಷೀಯವಾಗಿ ನಾಮ ನಿರ್ದೇಶನ ಹಿಂಪಡೆದಿದೆ ಎಂಬ ಕಾರಣವೊಡ್ಡಿ ಸರಕಾರದ ಕ್ರಮ ಪ್ರಶ್ನಿಸಲು ಅವಕಾಶವಿಲ್ಲ,” ಎಂದು ನ್ಯಾಯಪೀಠ ತಿಳಿಸಿದೆ.