ಜನ ಹೋಗದೇ ಇರೋದಕ್ಕೆ ಆಸರೆ ಮನೆಗಳು ಪಾಳು ಬಿದ್ದಿವೆ, ಕಳಪೆ ಕಾಮಗಾರಿಯಿಂದಲ್ಲ: ಗೋವಿಂದ ಕಾರಜೋಳ
ನಿಮ್ಮ ಸುದ್ದಿ ಬೆಂಗಳೂರು
ಸರ್ಕಾರ ಆಸರೆ ಎಂಬ ಯೋಜನೆಯಡಿ 2009ರಲ್ಲಿ ಪ್ರವಾಹ ಪೀಡಿತರಿಗೆ ಮನೆ ನಿರ್ಮಾಣ ಮಾಡಿತ್ತು. ಆದರೆ, ಜನ ತಮ್ಮ ಊರು ಬಿಟ್ಟು ಅಲ್ಲಿಗೆ ಹೋಗದೇ ಇರುವುದಕ್ಕೆ ಮನೆಗಳು ಪಾಳುಬಿದ್ದಿವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, 2009ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ 100 ವರ್ಷದ ಇತಿಹಾಸ ಮೀರಿದ ಮಳೆ ಆಯ್ತು. ಅನೇಕ ಹಳ್ಳ, ಕೊಳ್ಳ ನದಿಗಳು ಉಕ್ಕಿ ಹರಿದು, ಅನೇಕ ಮನೆಗಳಿಗೆ ನೀರು ಹೊಯ್ತು. ಆ ಸಂದರ್ಭದಲ್ಲಿ ಸರ್ಕಾರದಿಂದ ಹಾಗೂ ಕೊಡುವ ದಾನಿಗಳಿಂದ ಹಣ ಪಡೆದು ಕೆಲವು ಗ್ರಾಮಗಳನ್ನು ನಿರ್ಮಾಣ ಮಾಡಿದರು. ಸರ್ಕಾರಿ ಜಮೀನು ಇರ್ಲಿಲ್ಲ, ಜಮೀನು ಖರೀದಿ ಮಾಡಿ ಮನೆಗಳನ್ನು ಕಟ್ಟಿ ಕೊಟ್ವಿ ಎಂದರು.
ಜನ ಪ್ರವಾಹ ಕಮ್ಮಿಯಾದ ಸಂದರ್ಭದಲ್ಲಿ, ಮತ್ತೆ ಹಳೆಯ ಊರುಗಳಿಗೆ ಹೋದರು. ಆ ಮನೆಗಳಿಗೆ ವಾಸಕ್ಕೆ ಯಾರು ಹೋಗದೇ ಇರುವುದರಿಂದ ಜನ ನೀರಿನ ವ್ಯವಸ್ಥೆ ಪೈಪ್‌ಗಳನ್ನು, ಮೋಟಾರ್‌ಗಳನ್ನು ಕಿತ್ತುಕೊಂಡು ಹೋದರು. ಸರ್ಕಾರ ಆಸರೆ ಎಂಬ ಯೋಜನೆಯಡಿ 35 ಅಳತೆಯ ಸೈಟ್ ಕೊಟ್ಟು, ಮನೆ ಮಾಡಿಕೊಟ್ಟರು. ಯಾರು ಹೋಗಿಲ್ಲ ಅಂತ ಅವು ಪಾಳುಬಿದ್ದಿವೆ. ದಾನಿಗಳು ಸ್ವತಃ ಕಟ್ಟಿಕೊಟ್ಟಿದ್ದಾರೆ, ಸರ್ಕಾರವು ಕಟ್ಟಿಕೊಟ್ಟಿದೆ ಎಂದು ಹೇಳಿದರು.
2019-20 ನೇ ಸಾಲಿನಲ್ಲಿ 1205 ಕೋಟಿ ಪರಿಹಾರವನ್ನ ಒಂದೇ ಜಿಲ್ಲೆಗೆ ಕೊಟ್ಟಿದ್ದೇವೆ. 46,959 ಮನೆಗೆ ಕೊಟ್ಟಿದ್ದೇವೆ. ದೇಶದ ಇತಿಹಾಸದಲ್ಲೇ ಒಂದು ವರ್ಷದಲ್ಲಿ ಯಾರಾದ್ರೂ ಕೊಡಲು ಸಾಧ್ಯನಾ. ದಯವಿಟ್ಟು ಯಾರಾದ್ರೂ ಒಬ್ಬರು ಹೇಳಿದ್ರೆ ಅದು ಶಾಶ್ವತ ಅಲ್ಲ. ರೆಕಾರ್ಡ್ ಇದೆ ಬೇಕಾದ್ರೆ ನಾನು ಕಳುಹಿಸಿಕೊಡುತ್ತೇನೆ ಎಂದರು.