ಬೆಂಗಳೂರು: ಕರ್ನಾಟಕದಾದ್ಯಂತ ಜೂನ್ 1ರಿಂದ ಐದು ದಿನಗಳ ಕಾಲ ಮದ್ಯ ಮಾರಾಟ ಭಾಗಶಃ ಬಂದ್ ಆಗಲಿದ್ದು, ಜೂನ್ 2, 4 ಮತ್ತು 6 ರಂದು ಮದ್ಯ ಮಾರಾಟ ಸಂಪೂರ್ಣ ಸ್ಥಗಿತವಾಗಿರಲಿದ್ದು, ಜೂನ್ 1 ಮತ್ತು ಜೂನ್ 3 ರಂದು ಭಾಗಶಃ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ. ವಿಧಾನಪರಿಷತ್ ಚುನಾವಣೆ ಮತ್ತು ಲೋಕಸಭೆ ಚುನಾವಣೆಯ ಮತ ಎಣಿಕೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ನಾವು ಕಾರ್ಪೊರೇಟ್ ಪಾರ್ಟಿಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸುವ ಶನಿವಾರ ಸಂಜೆಯೇ ಮದ್ಯ ಮಾರಾಟದ ಮೇಲಿನ ನಿಷೇಧವು ಪ್ರಾರಂಭವಾಗುತ್ತದೆ. ಇದರಿಂದ ದಿನಕ್ಕೆ 30 ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಲಿದೆ ಎಂದು ಮಾರತಹಳ್ಳಿಯಲ್ಲಿರುವ ದೊಡ್ಡ ರೆಸ್ಟೋಬಾರ್‌ಗಳ ಕಾರ್ಯಾಚರಣೆಯ ಮುಖ್ಯಸ್ಥರೊಬ್ಬರು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ನಾವು ಅತಿಹೆಚ್ಚು ತೆರಿಗೆ ಪಾವತಿದಾರರಾಗಿದ್ದೇವೆ. ಆದರೂ ಮದ್ಯ ಮಾರಾಟಕ್ಕೆ ಪದೇಪದೆ ಅಡ್ಡಿಯುಂಟು ಮಾಡಲಾಗುತ್ತಿದೆ. ಮದ್ಯ ಮಾರಾಟ ನಿಷೇಧದಿಂದ nಮಗೆ ಭಾರಿ ಹಿನ್ನಡೆಯಾಗಲಿದೆ. ವಾರಾಂತ್ಯದಲ್ಲಿ ಶೇ 60 ವರೆಗೆ ಮದ್ಯ ಮಾರಾಟವಾಗುತ್ತದೆ. ಇದೀಗ ನಿಷೇಧದಿಂದ ಸರಿಸುಮಾರು ಶೇ 40 ರಷ್ಟು ನಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.
ಆಹಾರ ಪೂರೈಸಲು ಪಬ್‌ಗಳು ಮತ್ತು ರೆಸ್ಟೋಬಾರ್‌ಗಳಿಗೆ ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಭಾರತೀಯ ರಾಷ್ಟ್ರೀಯ ರೆಸ್ಟೋರೆಂಟ್‌ಗಳ ಸಂಘದ (ಎನ್‌ಆರ್‌ಎಐ) ಪ್ರತಿನಿಧಿಗಳು ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಅಧಿಕಾರಿಗಳು ಇನ್ನೂ ನಿರ್ಧಾರ ಕೈಗೊಂಡಿಲ್ಲ. ಈ ಸಂಬಂಧ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಏಪ್ರಿಲ್ 24 ರಿಂದ 26 ರವರೆಗೆ ಮದ್ಯ ಮಾರಾಟ ನಿಷೇಧ ಹೇರಲಾಗಿತ್ತು. ಇದೀಗ ಮತ್ತೆ ಮದ್ಯ ಮಾರಾಟ ನಿಷೇಧದಿಂದ ವಹಿವಾಟಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಬೆಂಗಳೂರಿನ ಮದ್ಯ ಮಾರಾಟಗಾರರು ಆತಂಕ ವ್ಯಕ್ತಪಡಿಸಿದರು.