ಬೆಂಗಳೂರು: ಹಾಸನದ ಮಾಜಿ ಶಾಸಕ ಪ್ರೀತಂಗೌಡ ಅವರ ಹೆಸರಿನಲ್ಲಿ ರಚಿಸಲಾಗಿರುವ ವಾಟ್ಸಾಪ್ ಗ್ರೂಪ್‌ಗೆ ಬಿಜೆಪಿ ಪರ ಪ್ರಚಾರ ನಡೆಸುವ ಕುರಿತಾದ ಸಂದೇಶ ರವಾನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹಾಸನದ ಪ್ರಥಮ ದರ್ಜೆ ಸಹಾಯಕ ನೌಕರ ಮಂಜುನಾಥ್ ಅವರನ್ನು ಅಮಾನತುಗೊಳಿಸಿ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ತಮ್ಮ ಅಮಾನತು ಆದೇಶ ರದ್ದುಗೊಳಿಸುವಂತೆ ಕೋರಿ ಬಿ.ಎಚ್. ಮಂಜುನಾಥ್ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಎಸ್. ಸುನಿಲ್‌ದತ್ ಯಾದವ್ ಹಾಗೂ ನ್ಯಾ. ಟಿ. ವೆಂಕಟೇಶ್ ನಾಯ್ಕ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ಅರ್ಜಿದಾರರ ವಾದ ಆಲಿಸಿದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ”ಕ್ಷೇತ್ರದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಅರ್ಜಿದಾರರನ್ನು ಅಮಾನತಿನಲ್ಲಿ ಇರಿಸುವುದು ಸೂಕ್ತವಲ್ಲ,” ಎಂದು ಅಭಿಪ್ರಾಯಪಟ್ಟು ಜಿಲ್ಲಾ ಚುನಾವಣಾಕಾರಿ ಹೊರಡಿಸಿರುವ ಆದೇಶಕ್ಕೆ ತಡೆ ನೀಡಿದ್ದು, ಸಂಬಂಧ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.
ಅರ್ಜಿದಾರರ ಪರ ವಕೀಲ ಎಂ.ಕೆ. ಪೃಥ್ವೀಶ್, ”ಅರ್ಜಿದಾರರು ಯಾವುದೇ ರಾಜಕೀಯ ಪಕ್ಷದ ಪರ ಕೆಲಸ ಮಾಡಿಲ್ಲ. ಜತೆಗೆ, ಯಾವುದೇ ರಾಜಕೀಯ ಪಕ್ಷದ ಪ್ರಚಾರದಲ್ಲೂ ಭಾಗಿಯಾಗಿಲ್ಲ. ಅವರು ತಮಗೆ ಗ್ರೂಪ್‌ನಲ್ಲಿ ಬಂದ ಸಂದೇಶ ರವಾನೆ ಮಾಡಿದ್ದು, ಆ ಸಂದೇಶ ಅವರು ಸೃಷ್ಟಿಸಿಲ್ಲ,” ಎಂದು ವಾದ ಮಂಡಿಸಿದರು.
35 ವರ್ಷದ ಸೇವಾ ಅವಧಿಯಲ್ಲಿ ಅರ್ಜಿದಾರರು ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿಲ್ಲಅವರ ವಿರುದ್ಧ ದಾಖಲಾದ ದೂರಿನಲ್ಲಿ ಸಂತ್ಯಾಂಶವಿಲ್ಲ. ಜಿಲ್ಲಾ ಚುನಾವಣಾಕಾರಿ ಹೊರಡಿಸಿದ್ದ ಆದೇಶ ರದ್ದುಗೊಳಿಸಬೇಕು,” ಎಂದು ಮನವಿ ಮಾಡಿದರು ಎಂದು ಮಾಹಿತಿ ತಿಳಿದು ಬಂದಿದೆ.