ನಿಮ್ಮ ಸುದ್ದಿ ಬಾಗಲಕೋಟೆ
ಬಾಗಲಕೋಟೆಯ ನಗರಾಸ್ಥಿಗಳ ಅಳತೆ ಕಾರ್ಯವನ್ನು ಈಗಾಗಲೇ ಆಧುನಿಕ ತಂತ್ರಜ್ಞಾನ ದ್ರೋಣ ಆಧಾರಿತ ಅಳತೆ ಕೆಲಸವನ್ನು ಈಗಾಗಲೇ ಪೂರೈಸಲಾಗಿದ್ದು, ಮುಂದಿನ ಹಂತದ ಕಾರ್ಯವನ್ನು ಕೈಗೊಂಡು ಸಾರ್ವಜನಿಕರಿಗೆ ಅಂತಿಮ ಆಸ್ತಿ ಹಕ್ಕು ದಾಖಲೆಗಳನ್ನು ವಿತರಿಸಲು ಕ್ರಮಕೈಗೊಳ್ಳುವಂತೆ ಪ್ರಾದೇಶಕ ಭೂದಾಖಲೆಗಳ ಜಂಟಿ ನಿರ್ದೇಶಕರಾದ ನಜ್ಮಾ ಪೀರಜಾದೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಯು.ಪಿ.ಓ.ಆರ್ ಕಛೇರಿಯಲ್ಲಿ ವಿಚಾರಣಾಧಿಕಾರಿಗಳ ತಪಾಸಕರ ಹಾಗೂ ಭೂಮಾಪಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಗಲಕೋಟೆಯ ನಗರಾಸ್ಥಿಗಳ ಡಿಪಿಆರ್ (ಕರಡು ನಗರಾಸ್ತಿ ಪ್ರತಿ) ತಯಾರಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿದ್ದು, ಸುಮಾರು 10,920 ಖಾಲಿ ನಿವೇಶನಗಳು ಇವರುವುದರಿಂದ ಹಕ್ಕುದಾರರು, ಮಾಲಿಕರ ಖಾಯಂ ವಿಳಾಸ ಲಭ್ಯವಿರದ ಕಾರಣ ಕರಡು ನಗರಾಸ್ತಿ ಪ್ರತಿಗಳನ್ನು ವಿತರಿಸಲಾಗಿರುವುದಿಲ್ಲವೆಂದು ಸಭೆಗೆ ತಿಳಿಸಿದಾಗ ಖಾಲಿ ನಿವೇಶನ, ಬಾಗಿಲು ಮುಚ್ಚಿದ ಮನೆಗಳ ಮಾಹಿತಿ ಕಲೆ ಹಾಕಿ ಮಾಹಿತಿ ನೀಡಲು ತಿಳಿಸಿದರು.
ಭೂದಾಖಲೆಗಳ ಉಪ ನಿರ್ದೇಶಕ ರವಿಕುಮಾರ ಎಂ. ಕರಡು ನಗರಾಸ್ತಿ ಪ್ರತಿಗಳನ್ನು ವಿತರಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರತಿಕಾ ಪ್ರಕಟಣೆ ನೀಡಿದ್ದರೂ ಸಹ ಸದರಿ ಖಾಲಿ ನಿವೇಶನಗಳ ಹಕ್ಕುದಾರರು ಡಿಪಿಆರ್ ತೆಗೆದುಕೊಂಡು ಹೋಗಿರುವುದಿಲ್ಲವೆಂದರು. ಸದರಿ ಡಿಪಿಆರ್‍ಗಳನ್ನು ಯುಪಿಓಆರ್ ಕಛೇರಿ ಬಾಗಲಕೋಟೆ, ಜಿಲ್ಲಾಧಿಕಾರಿಗಳ ಕಛೇರಿ ಆವರಣ, ಹೊಸ ಜಿಲ್ಲಾ ಪಂಚಾಯಿತಿ ಸಭಾಂಗಣ ಎದುಗಿರುವ ರೂಮ್ ನಂ:245 ರಲ್ಲಿ ಸಾರ್ವಜನಿಕರ ಪರಿಶೀಲನೆಗಾಗಿ ಇಡಲಾಗಿದ್ದು, ಆಸ್ತಿ ಮಾಲಿಕರು ಕಛೇರಿಯ ಅವಧಿಯಲ್ಲಿ ಬಂದು ತಮ್ಮ ಆಸ್ತಿಗಳ ಕರಡು ಪತ್ರವನ್ನು ಪಡೆದುಕೊಂಡು ಏನಾದರೂ ತಕರಾರುಗಳು ಇದ್ದಲ್ಲಿ ಅವಶ್ಯಕ ದಾಖಲೆಗಳೊಂದಿಗೆ 15 ದಿನಗೊಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ತಿಳಿಸಲಾಗಿದೆ ಎಂದರು.
ಅಲ್ಲದೇ ವೆಬ್‍ಸೈಟ್ www.rdservices.karnataka.gov.in ವಿಳಾಸದಲ್ಲಿಯೂ ಸಾವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಸರ್ಕಾರ ಅವಕಾಶವನ್ನು ಕಲ್ಪಿಸಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಸಹ ತಳಿಸಲಾಗಿದೆ ಎಂದರು. ಸಭೆಯಲ್ಲಿ ಭೂದಾಖಲೆ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಭೂಮಾಪನ ಸಿಬ್ಬಂದಿಗಳು ಉಪಸ್ಥಿತರಿದ್ದರು.