ಕಾರವಾರ: ಧಾರ್ಮಿಕ ಮತ್ತು ಜಲಸಾಹಸ ಕ್ರೀಡೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮುರುಡೇಶ್ವರದಲ್ಲಿ ಶಿವನ ದೇವಸ್ಥಾನದ ಪಕ್ಕದಲ್ಲಿ ಮೀನುಗಾರಿಕೆ ಸುಸಜ್ಜಿತ ಹೊರ ಬಂದರು ನಿರ್ಮಾಣಕ್ಕೆ ತಾಂತ್ರಿಕ ಪ್ರಕ್ರಿಯೆ ಚುರುಕುಗೊಂಡಿದೆ ಎಂದು ಮಾಹಿತಿ ತಿಳಿದು ಬಂದಿದೆ.
ದೇವಸ್ಥಾನದ ಪ್ರವೇಶ ಧ್ವಾರದ ಪಕ್ಕದಲ್ಲಿಎಡ ಭಾಗದಲ್ಲಿ ಮೀನುಗಾರಿಕೆ ಬಂದರು ನಿರ್ಮಾಣವಾಗಲಿದೆ. ಒಂದೂವರೆ ಸಾವಿರ ದೋಣಿ, ಬೋಟುಗಳನ್ನು ನಿಲ್ಲಿಸುವಷ್ಟು ಸಾಮರ್ಥ್ಯದ ದೊಡ್ಡ ಬಂದರು ನಿರ್ಮಾಣಕ್ಕೆ ಈ ವರ್ಷದ ಬಜೆಟ್‌ನಲ್ಲಿಅನುಮೋದನೆ ನೀಡಲಾಗಿದ್ದು, ಅದರಂತೆ ಕ್ರಿಯಾಯೋಜನೆ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ.
ಈ ಸಂಬಂಧ ಮೀನುಗಾರಿಕೆ, ಬಂದರು ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಉನ್ನತ ಸಭೆ ಕೂಡ ನಡೆದಿದೆ.ಮುರುಡೇಶ್ವರದಲ್ಲಿ 400 ಮೋಟರೀಕೃತ ದೋಣಿಗಳು ಇವೆ. 800 ಕ್ಕೂ ಹೆಚ್ಚು ನಾಡದೋಣಿಗಳು ಇದ್ದು, ಅವುಗಳು ಸೇರಿದಂತೆ ಯಾಂತ್ರೀಕೃತ ಬೋಟುಗಳು ತಂಗಲು ಅನುಕೂಲ ಆಗುವಂಥ ಬಂದರು ನಿರ್ಮಾಣವಾಗಲಿದೆ.
ಇದೇ ಬಂದರಿಗಾಗಿ ಒಂದು ಜಲತಡೆಗೋಡೆ (ಬ್ರೇಕ್ ವಾಟರ್) ಕೂಡ ನಿರ್ಮಿಸಬೇಕಾಗಿದ್ದು, ಅದೆಲ್ಲದಕ್ಕೂ ಕ್ರಿಯಾಯೋಜನೆ ಆಗಬೇಕಿದೆ ಎಂದು ಮೀನುಗಾರಿಕೆ ಜಂಟಿ ನಿರ್ದೇಶಕ ಬಬಿನ ಬೋಪಣ್ಣ ತಿಳಿಸಿದರು.ಮುರುಡೇಶ್ವರಕ್ಕೆ ವರ್ಷಾಂತ್ಯ ಮತ್ತು ರಜಾ ದಿನಗಳಲ್ಲಿ ಲಕ್ಷಗಟ್ಟಲೆ ಪ್ರವಾಸಿಗರು ಬರುತ್ತಾರೆ. ಇಲ್ಲಿ ಪ್ರವಾಸೋದ್ಯಮ ಬೆಳವಣಿಗೆಯಿಂದ ಮೀನುಗಾರಿಕೆಗೆ ಜಾಗದ ಕೊರತೆ ಆಗಿದೆ. ಬಂದರಿನಲ್ಲಿ ಜಟ್ಟಿ ಸಹಿತ ಜಾಗದ ವ್ಯವಸ್ಥೆ ಮಾಡಬೇಕು.
ಮುರುಡೇಶ್ವರಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಮುಖ್ಯ ರಸ್ತೆ ಇದೆ. ಅಲ್ಲಿ ಪ್ರವಾಸಿಗರ ವಾಹನವೇ ಹೆಚ್ಚಿರುತ್ತವೆ. ಹಾಗಾಗಿ ಬಂದರಿಗೆ ಪ್ರತ್ಯೇಕ ರಸ್ತೆ ಬೇಕು. ದೇವಸ್ಥಾನದ ಎದುರಿನ ಎಡ-ಬಲದಲ್ಲಿರುವ ಗ್ರಾಮ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವಂತೆ ವಿಸ್ತರಿಸಿದರೆ ಎಲ್ಲರಿಗೂ ಅನುಕೂಲ ಎಂದು ಮುರುಡೇಶ್ವರ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಹರಿಕಂತ್ರ ತಿಳಿಸಿದರು.