ಬೆಂಗಳೂರು: ಲೋಕಸಭೆ ಚುನಾವಣೆಗೆ ತೆರೆ ಬಿದ್ದ ಬಳಿಕವೇ ವಿಧಾನ ಪರಿಷತ್ ಚುನಾವಣೆ ಸಂಬಂಧ ನಾನಾ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಸದಸ್ಯರ ಆಯ್ಕೆಗೊಳಿಸಲು ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 3 ಕಡೆಯ ದಿನವಾಗಿದೆ. ಅಷ್ಟರ ಒಳಗೆ ಕಾಂಗ್ರೆಸ್ ಹೈಕಮಾಂಡ್ ಪಟ್ಟಿ ಪ್ರಕಟಿಸಲಿದೆ.
ಈ ನಡುವೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ”65 ಮಂದಿಯ ಹೆಸರು ಶಾರ್ಟ್ ಲಿಸ್ಟ್ ಮಾಡಿ ಹೈಕಮಾಂಡ್‌ಗೆ ಸಲ್ಲಿಸಲಾಗಿದೆ. ರಾಜ್ಯದ ಎಲ್ಲ ಭಾಗದಿಂದಲೂ ಆಕಾಂಕ್ಷಿಗಳಿದ್ದಾರೆ. ಮಂಗಳೂರಿನಲ್ಲಿ 21, ಚಿಕ್ಕಮಗಳೂರಿನಲ್ಲಿ 9 ಆಕಾಂಕ್ಷಿಗಳಿದ್ದಾರೆ. ಯತೀಂದ್ರ ಬಗ್ಗೆ ಹೈಕಮಾಂಡ್ ಈ ಮೊದಲೇ ಮಾತು ಕೊಟ್ಟಿತ್ತು,” ಎಂದು ತಿಳಿಸಿದರು.
ಕಾಂಗ್ರೆಸ್‌ನ ಉನ್ನತ ಮೂಲಗಳ ಪ್ರಕಾರ, ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮಾತ್ರ ಟಿಕೆಟ್ ಖಚಿತವಾಗಿದೆ. ಉಳಿದಂತೆ ಸಚಿವ ಎನ್.ಎಸ್. ಭೋಸರಾಜು, ಸಿಎಂ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಅವರನ್ನು ಮುಂದುವರಿಸುವ ಬಗ್ಗೆ ವರಿಷ್ಠರು ಅಂತಿಮ ನಿರ್ಣಯ ಕೈಗೊಳ್ಳಬೇಕಿದೆ. ಹಾಗೆಯೇ ಹೊಸ ಮುಖಗಳಿಗೆ ಅವಕಾಶ ನೀಡಲು ಹೈಕಮಾಂಡ್ ಯೋಚಿಸಿದೆ.
ಪರಿಷತ್ ಉಮೇದುವಾರರ ಪಟ್ಟಿ ಸಿದ್ಧಪಡಿಸಲು ದಿಲ್ಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಗುರುವಾರ ಬೆಂಗಳೂರಿಗೆ ವಾಪಸಾಗಿದ್ದಾರೆ. ಲೋಕಸಭೆ ಚುನಾವಣೆ ಕಡೆಯ ಚರಣದಲ್ಲಿ ಇರುವುದರಿಂದ ಸದ್ಯ ಬಿಡುವಿಲ್ಲ. ಜೂನ್ 1ರ ಬಳಿಕ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಹೈಕಮಾಂಡ್ ಪ್ರತಿನಿಧಿಗಳು ಉಭಯ ನಾಯಕರಿಗೂ ಹೇಳಿ ಕಳುಹಿಸಿದ್ದಾರೆ ಎನ್ನುವುದು ಕಾಂಗ್ರೆಸ್ ಮೂಲಗಳ ಮಾಹಿತಿ.