ಬಾಗಲಕೋಟೆ
ಬಿಜೆಪಿಯ ಭದ್ರ ಕೋಟೆಯಲ್ಲಿ ಬಾಗಲಕೋಟೆ ಲೋಕಸಭೆ ಕ್ಷೇತ್ರವೂ ಒಂದಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಈ ಕೋಟೆಯನ್ನು ಛಿದ್ರಗೊಳಿಸಿ ಗೆಲುವಿನ ದಾಖಲೆ ಬರೆಯುವ ಹೊಣೆಯನ್ನು ಕಾಂಗ್ರೆಸ್ ಹೈ ಕಮಾಂಡ್ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೆಗಲಿಗೆ ಹಾಕಿದೆ.
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಶತಾಯ-ಗತಾಯ ಕೇಸರಿ ಕೋಟೆಯಲ್ಲಿ ಕೈ ಅಭ್ಯರ್ಥಿ ಗೆಲ್ಲಿಸಲೇ ಬೇಕಾದ ಅನಿವಾರ್ಯತೆಯನ್ನು ಕಾಂಗ್ರೆಸ್ ಹೈಕಮಾಂಡ್ ಸೃಷ್ಟಿಸಿದೆ. ಪಕ್ಷದ ಹೈಕಮಾಂಡ್ ನೀಡಿರುವ ಈ ಟಾಸ್ಕ್ ಅಂದುಕೊಂಡಷ್ಟು ಸರಳವಾಗಿಲ್ಲ.
ಪಕ್ಷ ನಿರ್ಧರಿಸುವ ಇಲ್ಲವೇ ತಾವೇ ಸೂಚಿಸುವ ಅಭ್ಯರ್ಥಿಯನ್ನು ಲೋಕಸಭೆ ಚುನಾವಣೆ ಅಖಾಡಕ್ಕಿಳಿಸಿ, ಗೆಲ್ಲಿಸಿಕೊಂಡು ಬರುವ ಮೂಲಕ ” ತಲೆದಂಡ” ವೆಂಬ ಮಾಯೆಯಿಂದ ತಪ್ಪಿಸಿಕೊಳ್ಳಬೇಕಿದೆ. ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು ಎನ್ನುವ “ಕೈ” ಕಮಾಂಡ್ ನ ಈ ನಿರ್ಧಾರ ಅಭ್ಯರ್ಥಿ ಆಗಬೇಕು ಎನ್ನುವವರಿಗಿಂತ ಹೆಚ್ಚಿನ ಆತಂಕವನ್ನು ಸಚಿವರಿಗೆ ತಂದಿಟ್ಟಿದೆ.
ಅಂದ ಹಾಗೆ ಬಾಗಲಕೋಟೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಉಳಿದ 3 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಇಷ್ಟಾದರೂ ಲೋಕಚುನಾವಣೆ ಗೆದ್ದೆ ಗೆಲ್ಲುತ್ತೇವೆ ಎಂದು ಹೇಳುವ ಸ್ಥಿತಿ ಕಾಂಗ್ರೆಸ್ ಪಾಳೆಯದಲ್ಲಿ ಇನ್ನೂ ಸೃಷ್ಠಿ ಆಗಿಲ್ಲ.
ಕಳೆದ ಆರು ತಿಂಗಳು ಹಿಂದೆ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ, ಪಕ್ಷದ ಮುಖಂಡರ ಸ್ವಪ್ರತಿಷ್ಠೆ, ಆಂತರಿಕ ಭಿನ್ನಾಭಿಪ್ರಾಯದ ಪರಿಣಾಮ ತೀವ್ರ ಮುಖಭಂಗ ಅನುಭವಿಸಿದೆ. ಈಗ ಅಲ್ಲಿ ಮುಖಂಡರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕು ಎನ್ನುವ ಏಕೈಕ ಉದ್ದೇಶ ಹೊಂದಿದ್ದಾರೆ. ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಮಂತ್ರ ಜಪಿಸುತ್ತಿದ್ದಾರೆ.
ಸಂಘ ಪರಿವಾರದ ಗಟ್ಟಿ ನೆಲವಾಗಿರುವ ಇಲ್ಲಿ ಪ್ರಧಾನಿ ಮೋದಿ ನರೇಂದ್ರಮೋದಿ ಅವರ ವರ್ಚಸ್ಸು ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ ಇದೆ. ಹಾಗಾಗಿ ಇಲ್ಲಿನ ಜನ ಸಾಮಾನ್ಯರು ವಿಧಾನಸಭೆ ಚುನಾವಣೆಯೇ ಬೇರೆ, ಲೋಕಸಭೆ ಚುನಾವಣೆಯೇ ಬೇರೆ ಎಂದು ಸಹಜವಾಗಿ ಆಡಿಕೊಳ್ಳುತ್ತಿದ್ದಾರೆ.
ಏತನ್ಮಧ್ಯೆ ಅಬಕಾರಿ ಸಚಿವ ತಿಮ್ಮಾಪುರ ಅವರು ಕಾಂಗ್ರೆಸ್ಸಿಗರನ್ನೆಲ್ಲ ಒಗ್ಗೂಡಿಸಿಕೊಂಡು ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲು ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡಬೇಕಿದೆ.
ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಎಲ್ಲ ಗ್ಯಾರಂಟಿಗಳ ಪ್ರಯೋಜನವನ್ನು ಪ್ರತಿ ಕುಟುಂಬಗಳು ಪಡೆಯುತ್ತಿವೆ. ಗ್ಯಾರಂಟಿ ಯೋಜನೆ ಜನಪ್ರಿಯತೆ, ಅಲ್ಪ ಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮತ ಬ್ಯಾಂಕ್ ಜತೆಗೆ ಜಿಲ್ಲೆಯ ಪ್ರಭಾವಿ ಸಮುದಾಯಗಳ ಮತಗಳನ್ನು ಸೆಳೆಯುವ ರಣತಂತ್ರವನ್ನು ತಿಮ್ಮಾಪುರ ರೂಪಿಸಬೇಕಿದೆ.
ಪಕ್ಷದ ಹೈಕಮಾಂಡ್ ನೀಡಿರುವ ಟಾಕ್ಸ್ ಗೆಲ್ಲಲು ಸಚಿವ ತಿಮ್ಮಾಪುರ ಅದೆಂತಹ ಚಾಣಾಕ್ಷ್ಯ ತಂತ್ರಗಳ ಮೋರೆ ಹೋಗಲಿದ್ದಾರೆ, ಯಾರನ್ನು ಅಭ್ಯರ್ಥಿ ಆಗಿಸಲು ಗ್ರೀನ್ ಸಿಗ್ನಲ್ ತೋರಲಿದ್ದಾರೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.