ಬಾಗಲಕೋಟೆ
ಸಾಹಿತಿ ರವೀಂದ್ರ ಮುದ್ದಿ ಅವರು ಕೃತಿಗಳಲ್ಲಿನ ಪಾತ್ರಗಳು ನಮ್ಮ ಸುತ್ತಲಿನ ಪರಿಸರದ ವ್ಯಕ್ತಿಗಳ ರೂಪದಲ್ಲೇ ಕಾಣಸಿಗುತ್ತವೆ. ಅದೇ ಅವರ ಕೃತಿಗಳಲ್ಲಿನ ಶಕ್ತಿಯಾಗಿದೆ ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ಹಣಕಾಸು ನಿಯಂತ್ರಣಾಕಾರಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಹೇಳಿದರು.
ನವನಗರದ ಕಾನಿಪ ಸಂಘದಲ್ಲಿ ನಡೆದ ರವೀಂದ್ರ ಮುದ್ದಿ ಕಥಾ ಸಂಕಲನಗಳ ಪುಸ್ತಕ ಪರ್ಯಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳ್ಳಿಸೊಗಡಿನಿಂದ ಬಂದವರಿಗೆ ಹಾವೇರಿಯ ವರದಾ ತೀರದ ಕಥೆಗಳು ಮತ್ತು ಸಿಗ್ನಲ್ ಜಂಪ್ ಕಥಾ ಸಂಕಲನದ ಕಥೆಗಳು ಹತ್ತಿರವಾಗುತ್ತದೆ. ನಾವು ನಿತ್ಯ ನೋಡುವ ಪಾತ್ರಗಳು ಕೃತಿಯಲ್ಲಿ ಕಾಣಸಿಗುತ್ತವೆ ಎಂದರು.
ಸ್ಥಳೀಯವಾಗಿ ಬಳಕೆಯಾಗುವ ಭಾಷೆ, ಹೆಸರುಗಳು ಕೃತಿಯಲ್ಲಿ ಅಸ್ಮಿತೆಯ ಕುರುಹುಗಳಾಗಿ ಕಾಣಸಿಗುತ್ತವೆ. ನಿರೂಪಣಾ ಶೈಲಿ, ಧಾಟಿಯಲ್ಲಿ ಒಂದಷ್ಟು ಬದಲಾವಣೆ ಆಗಬೇಕು ಎಂದರು.
ಬರಹಗಾರ್ತಿ ಮುರ್ತುಜಾ ಬೇಗಂ ಸಿಗ್ನಲ್ ಜಂಪ್ ಕೃತಿ ಕುರಿತು ಮಾತನಾಡಿ, ಢಮರುಗ ಎಂಬ ಕಥೆಯೊಂದಿಗೆ ಕೃತಿ ಆರಂಭವಾಗುತ್ತದೆ. ಬಡವನ ಸಿಟ್ಟು, ವಿಧಾನಸೌಧ ಅಲ್ಲಾಡಿಸಿರುವ ಪ್ರಸಂಗವನ್ನು ಮುದ್ದಿಯವರು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಇಂತಹ ನವೀನ ಚಿಂತನೆಯ ಬರಹಗಾರರ ಸಂಖ್ಯೆ ಹೆಚ್ಚಾಗಬೇಕೆಂದು ಹೇಳಿದರು.
ಚಿತ್ರ ನಿರ್ದೇಶಕ ಹಯವದನ, ವರದಾ ನದಿ ತಟದ ಜೀವನ ಅಲ್ಲಿಗಷ್ಟೇ ಸೀಮಿತವಾಗಿಲ್ಲ. ಕೃಷ್ಣೆ, ಘಟಪ್ರಭೆ ತಟದಲ್ಲಿ ವಾಸಿಸುವವರಿಗೂ ಅವರದೇ ಜೀವನದ ಕಥೆ ಅನಿಸುತ್ತದೆ. ಮುದ್ದಿ ಅವರ ಬರಹದಲ್ಲಿ ನಮ್ಮ ಕಡೆಯ ಭಾಷಾ ಸೊಗಡು ಆಸ್ವಾದಿಸಬಹುದು. ಒಂದು ಒಳ್ಳೆ ಕೃತಿಯಿದ್ದರೆ ಅಲ್ಲಿ ಲೇಖಕ ಬೆಳೆಯುವುದರ ಜತೆಗೆ ಪಾತ್ರಗಳು ಬೆಳೆಯುತ್ತ ಸಾಗುತ್ತವೆ. ಅದರ ಓದುಗರು ಬೆಳೆಯುತ್ತಾ ಸಾಗುತ್ತಾರೆ. ಹೀಗೆ ಸಾಹಿತ್ಯದ ಚಕ್ರ ಬೆಳವಣಿಗೆ ಸಾಗುತ್ತದೆ ಎಂದರು.
ಅಂಜುಮನ್ ಶಿಕ್ಷಣ ಸಂಸ್ಥೆ ಪ್ರಾಚಾರ್ಯ ಡಾ.ಮೈನುದ್ಧಿನ್ ರೇವಡಿಗಾರ ಮಾತನಾಡಿದರು. ಕೃತಿಕಾರ ರವೀಂದ್ರ ಮುದ್ದಿ, ಉದ್ಯಮಿ ಪವನ್ ಸೀಮಿಕೇರಿ, ಕಿರಣ ಕುಲಕರ್ಣಿ, ಕಾನಿಪ ಅಧ್ಯಕ್ಷ ಆನಂದ ದಲಭಂಜನ, ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದ ನಾಯಕ ಅಂಜನ್ ನಾಗೇಂದ್ರ, ಹಿರಿಯ ಪತ್ರಕರ್ತ ಮಹೇಶ ಅಂಗಡಿ, ರಾಜೇಶ್ವರಿ ದೇಶಪಾಂಡೆ ಇತರರಿದ್ದರು.
ಮಹಾಭಾರತ, ರಾಮಾಯಣದ ಕಥೆಗಳು ಭಾರತೀಯರನ್ನು ಗಾಢವಾಗಿ ಅವಲಂಬಿಸಿವೆ. ಅದರಲ್ಲಿನ ಅನೇಕ ಪಾತ್ರಗಳನ್ನು ನಮ್ಮ ಗುಣಗಳೊಂದಿಗೆ ತಾಳೆಹಾಕಿ ನೋಡುವ ಸ್ವಭಾವವಿದೆ. ಮುದ್ದಿ ಅವರ ವರದಾ ತೀರದ ಕಥೆಗಳಲ್ಲಿನ ಪಾತ್ರಗಳೂ ಸಹ ಅದೇ ರೀತಿಯಲ್ಲಿ ನಮ್ಮನ್ನು ಆವರಿಸುತ್ತವೆ.
-ಡಾ.ಪ್ರಕಾಶ ಖಾಡೆ, ಸಾಹಿತಿ