ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕೆಲವು ಹಾಲಿ ಸಂಸದರಿಗೆ ವಯಸ್ಸು ಹಾಗೂ ಅನಾರೋಗ್ಯ ಕಾರಣದಿಂದಾಗಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂಬ ಸುಳಿವನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಎರಡು ದಿನಗಳ ಕಾಲ ದೆಹಲಿಯಲ್ಲಿ ಸಭೆ ನಡೆಸಲಾಗಿದ್ದು, ಒಂದು ಸುತ್ತಿನ ಮಾತುಕತೆ ನಡೆದಿದ್ದು, ಸಭೆಯಲ್ಲಿ ರಾಜ್ಯ ಕೋರ್ ಕಮಿಟಿ ಕಳಿಸಿದ್ದ ಪಟ್ಟಿ ಬಗ್ಗೆ ಚರ್ಚೆ ಆಗಿದ್ದು, ಸವಿಸ್ತಾರವಾಗಿ ಅಮಿತ್ ಶಾ, ನಡ್ಡಾ, ಸಂತೋಷ್ ಅವರ ಜೊತೆ ಚರ್ಚೆ ಆಗಿದೆ. ವರಿಷ್ಠರು ಅಭ್ಯರ್ಥಿಗಳ ಮಾಹಿತಿ, ಹಿನ್ನೆಲೆ ತೆಗೆದುಕೊಂಡಿದ್ದಾರೆ ಎಂದರು.
ಕೆಲವರನ್ನು ವಯಸ್ಸು, ಆರೋಗ್ಯ ಕಾರಣದಿಂದ ಬದಲಾವಣೆ ಮಾಡಲಾಗುತ್ತಿದ್ದು, ಬಹುತೇಕ ಚರ್ಚೆ ಒಂದು ಹಂತಕ್ಕೆ ಬಂದಿದ್ದು, ಗೊಂದಲ ಇರುವ ಕ್ಷೇತ್ರಗಳ ಬಗ್ಗೆ ಚರ್ಚೆ ಆಗಬೇಕಿದೆ.ಹೈಕಮಾಂಡ್ ನಾಯಕರಿಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಹೈಕಮಾಂಡ್ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾರಿಗೆ ಟಿಕೆಟ್ ಯಾರಿಗೆ ಇಲ್ಲ ಅನ್ನೋದು ಮುಖ್ಯ ಅಲ್ಲ. ಯಾರಿಗೆ ಕೊಟ್ಟರೂ ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದರು.
ಈ ಬಾರಿ ಹೊಸ ಮುಖಗಳಿಗೆ ಟಿಕೆಟ್ ಸಿಗಬಹುದಿದ್ದು, ಇನ್ನೊಂದು ಸುತ್ತಿನ ಮಾತುಕತೆ ಆದ ಕೂಡಲೇ ಪಟ್ಟಿ ಬಿಡುಗಡೆ ಮಾಡುತ್ತಾರೆ. ಯಾವ ಕ್ಷೇತ್ರದಲ್ಲಿ ಸಮಸ್ಯೆ ಇದೆಯೋ ಅಲ್ಲಿ ಮತ್ತೊಮ್ಮೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ. ಮೈಸೂರು, ಮಂಡ್ಯ, ಗುಲ್ಬರ್ಗ, ಹಾಸನ ಎಲ್ಲಾ ಕ್ಷೇತ್ರಗಳ ಬಗ್ಗೆ ಚರ್ಚೆ ಆಗಿದೆ. ಹಾಲಿ ಉತ್ತಮ ಸಂಸದರಿಗೆ ಮತ್ತೊಮ್ಮೆ ಅವಕಾಶ ಕೊಡುವ ಬಗ್ಗೆ ಚರ್ಚೆ ಆಗಿದೆ ಎಂದು ವಿವರಿಸಿದರು.