ಅಕ್ಕಮಹಾದೇವಿ ಮಹಿಳಾ ವಿ.ವಿ. ಮುಚ್ಚುವ ಪ್ರಶ್ನೇಯೇ ಇಲ್ಲ
-ಗೋವಿಂದ ಎಂ.ಕಾರಜೋಳ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗುವಂತೆ ಆ ಭಾಗದ ಹೆಣ್ಣುಮಕ್ಕಳು ಹೆಚ್ಚು, ಹೆಚ್ಚು ವಿದ್ಯಾವಂತರಾಗುವಂತೆ ಶೈಕ್ಷಣಿಕ ವ್ಯವಸ್ಥೆಯನ್ನು ಉನ್ನತೀಕರಿಸಲು ತನ್ಮೂಲಕ ಸುಸಂಸ್ಕೃತ, ಸುಶಿಕ್ಷಿತ ಸಮಾಜವನ್ನು ನಿರ್ಮಿಸಿ ಸ್ವಾವಲಂಬಿ ಮಹಿಳೆಯರನ್ನು ಉತ್ತೇಜಿಸುವ ಉದಾತ್ತ ಉದ್ದೇಶದಿಂದ ಪ್ರಾರಂಭವಾದ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಶ್ನೆಯೇ ಇಲ್ಲ.
ವಿಶ್ವ ವಿದ್ಯಾಲಯದ ಅಭಿವೃದ್ಧಿಗೆ ಆ ಭಾಗದ ಜನಪ್ರತಿನಿಧಿಯಾಗಿ ಮತ್ತು ಜನಸಮುದಾಯದ ಆಶೋತ್ತರಗಳನ್ನು ಈಡೇರಿಸುವ ಮತ್ತು ಜನರ ಅಪೇಕ್ಷೆ, ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯ ನಿರ್ವಹಿಸುವ ಅಳಿಲುಸೇವೆಯ ಮೂಲಕ ವಿಶ್ವ ವಿದ್ಯಾಲಯದ ಅಭಿವೃದ್ಧಿಗೆ ಕೊಡುಗೆ ನೀಡುವ ಸೌಭಾಗ್ಯವು ನನ್ನದಾಗಿದೆ.
ಈ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಕೇವಲ ಒಂದೇ ಜಿಲ್ಲೆ ಅಲ್ಲ. ಹದಿಮೂರು ಜಿಲ್ಲೆಗಳು ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿವೆ. ಈ ಮಹಿಳಾ ವಿಶ್ವ ವಿದ್ಯಾಲಯವನ್ನು ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ಎಂದು ಪುನರ್ ನಾಮಕರಣ ಮಾಡಿ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದ ಅಕ್ಕಮಹಾದೇವಿಯವರಿಗೆ ಗೌರವ ಸಲ್ಲಿಸಿದ ಕೀರ್ತಿ ಭಾರತೀಯ ಜನತಾ ಪಕ್ಷದ ಸರ್ಕಾರಕ್ಕೆ ಸಲ್ಲುತ್ತದೆ.
ಶೈಕ್ಷಣಿಕ ವ್ಯವಸ್ಥೆಯನ್ನು ಉತ್ತಮಪಡಿಸುವ ಸದುದ್ದೇಶದಿಂದ ಪ್ರಾರಂಭವಾಗಿರುವ ಮಹಿಳಾ ವಿಶ್ವ ವಿದ್ಯಾಲಯವನ್ನು ಮುಚ್ಚಲಾಗುವುದು ಎಂಬ ಸುಳ್ಳು ವದಂತಿಗಳನ್ನು ಯಾರೂ ಹರಡಬಾರದು ಮತ್ತು ಇಂತಹ ಸುಳ್ಳುವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಈ ಮೂಲಕ ವಿನಂತಿಸುವೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.