ಸಿಂಧನೂರು: ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಜನರ ಮನೆಮನೆಗೆ ನೀರು ಹರಿಸಿ, ನೀರಿನ ಸಮಸ್ಯೆ ನಿವಾರಿಸಬೇಕೆಂಬ ಮಹತ್ವದ ಜೆಜೆಎಂಯೋಜನೆಯಡಿ ನೂರಾರು ಕೋಟಿ ಅನುದಾನ ನೀಡಿದರೂ ಸಮರ್ಪಕ ಕಾಮಗಾರಿ ಮಾಡದೆ, ನೀರಿನ ನೆಪದಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ನಡೆಸಿರುವ ಅನುಮಾನ ವ್ಯಕ್ತವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ತಾಲೂಕಿನ 182 ಗ್ರಾಮಗಳಲ್ಲಿ ಗ್ರಾಮೀಣ ಕುಡಿವ ನೀರು ಮತು ನೈರ್ಮಲ್ಯ ಇಲಾಖೆಯಿಂದ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಕೈಗೊಳ್ಳಲಾಗಿದ್ದು, ರಸ್ತೆ ಒಡೆದು, ಪೈಪ್ ಹಾಕಿ, ಮನೆ ಎದುರು ನಲ್ಲಿಗಳನ್ನು ಜೋಡಿಸಲಾಗಿದೆ. ಅಧಿಕಾರಿಗಳು ನೀಡುವ ಪ್ರಗತಿ ವರದಿಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ಪೂರ್ಣಗೊಂಡ ಗ್ರಾಮಗಳಿಗೆ ಭೇಟಿ ನೀಡಿದರೆ, ಯೋಜನೆಯಡಿ ನಡೆದಿರುವ ಅಕ್ರಮವು ಕಣ್ಣಿಗೆ ರಾಚುತ್ತದೆ.
ರೈತನಗರಕ್ಯಾಂಪ್, ರಾಮಾಕ್ಯಾಂಪ್‌ನ ನಿವಾಸಿಗಳು ಮನೆಮನೆಗೆ ನೀರಿನ ಪೈಪ್‌ಲೈನ್ ಇದೆ. ಜೆಜೆಎಂ ಯೋಜನೆ ಬೇಡವೆಂದು ತಿರಸ್ಕರಿಸಿರುವ ಉದಾಹರಣೆ ಇವೆ. ಕಮೀಷನ್ ಆಸೆಗೆ ಜೆಜೆಎಂ ಯೋಜನೆಯ ಅನುದಾನ ಖರ್ಚು ಮಾಡಲಾಗುತ್ತಿದೆಯೇ? ಎಂಬ ಅನುಮಾನ ವ್ಯಕ್ತವಾಗಿದೆ.ಸಿಂಧನೂರು ತಾಲೂಕಿನ ಹೊಸಳ್ಳಿ ಇ.ಜೆ ಗ್ರಾಮ ಪಂಚಾಯಿತಿಯಷ್ಟೇ ಅಲ್ಲದೆ ಕಾಮಗಾರಿ ಪೂರ್ಣಗೊಂಡಿರುವ ಗ್ರಾಮಗಳಲ್ಲಿ ಹಾಕಿರುವ ನಲ್ಲಿಗಳಲ್ಲಿ ನೀರು ಪೂರೈಕೆ ಆಗುವುದು ಮತ್ತು ಪೈಪ್‌ಲೈನ್ ಕುರಿತು ತನಿಖೆ ನಡೆಯಬೇಕಿದೆ.
ತಾಲೂಕಿನ ಹಂಚಿನಾಳ ಕ್ಯಾಂಪ್ ಸೇರಿ ಬಹುತೇಕ ಗ್ರಾಮಗಳಲ್ಲಿ ನೀರಿನ ಪೈಪ್‌ಲೈನ್ ಇದ್ದರೂ ಮತ್ತೊಮ್ಮೆ ನೀರಿನ ಪೈಪ್‌ಲೈನ್‌ಗೆ ಜೆಜೆಎಂ ಯೋಜನೆಯಡಿ ಅನುದಾನ ಒದಗಿಸುವ ಮೂಲಕ ಅಕ್ರಮ ನಡೆಸಲು ಹುನ್ನಾರ ನಡೆಸಿರುವುದು ಶಾಸಕ ಹಂಪನಗೌಡ ಬಾದರ್ಲಿ ಗಮನಕ್ಕೂ ಬಂದಿತ್ತು. ಬಹುತೇಕ ಗ್ರಾಮಗಳಲ್ಲಿ ಮನೆಮನೆಗೆ ನೀರಿನ ಪೈಪ್‌ಲೈನ್ ಹಾಗೂ ನೀರಿನ ಪೂರೈಕೆ ಇದ್ದರೂ ಜೆಜೆಎಂ ಯೋಜನೆಯಲ್ಲಿ ಮತ್ತೊಮ್ಮೆ ಅನುದಾನ ಮೀಸಲಿರಿಸಲಾಗಿದೆ.