ಬೆಂಗಳೂರು: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಯಾರೊಬ್ಬರು ಕೂಡಾ ಕಾವೇರಿ ನೀರಿನ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲ. ಹೀಗಾಗಿ ಚುನಾವಣೆ ಮುಂದೂಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ನೀರಿಗಾಗಿ ಆಗ್ರಹಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳಿಂದ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡಲಾಗಿದ್ದು, ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೀರಿಲ್ಲ. ಎಲ್ಲೆಡೆ ಹಾಹಾಕಾರ ಶುರುವಾಗಿದೆ. ಹೀಗೆ ಮುಂದುವವರಿದರೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ 50 ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು, ಖಾಲಿ ಕೊಡ ಹಿಡಿದು ಮೈಸೂರು ಬ್ಯಾಂಕ್ ವೃತ್ತ ಬಳಿ ರಸ್ತೆ ತಡೆಗೆ ಯತ್ನಿಸಲಾಗಿದೆ. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಬಿಎಂಟಿಸಿ ಬಸ್ನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕನ್ನಡ ಧ್ವಜ ಹಾಗೂ ಖಾಲಿ ಕೊಡ ಪ್ರದರ್ಶನ ಮಾಡಲಾಗಿದ್ದು, ಬೇಕೆ ಬೇಕು ಕಾವೇರಿ ನೀರು ಬೇಕು ಅಂತ ಆಕ್ರೋಶ ಹೊರಹಾಕಿದ್ದಾರೆ.
ಪ್ರಾಧಿಕಾರ, ನಿರ್ವಹಣಾ ಸಮಿತಿ ತಮಿಳುನಾಡಿಗೆ ನೀರು ಹರಿಸಿದೆ. ಬೆಂಗಳೂರಲ್ಲಿ ಕುಡಿಯಲು ನೀರಿಲ್ಲ, ನೀರಿಗೆ ಹಾಹಾಕಾರ ಶುರುವಾಗಿದೆ. ಯಾರೊಬ್ಬರು ಕೂಡಾ ಕಾವೇರಿ ನೀರಿನ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲ. ಹೀಗೆ ಮುಂದುವವರಿದರೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಹೇಳಿದ್ದಾರೆ.