ಬೆಂಗಳೂರು: ಬಿಜೆಪಿಗೆ ಅನುಕೂಲವಾದಾಗ ಮಾತ್ರ ಹಿಂದುತ್ವ. ಎಷ್ಟೂಂತ ವಿಷ ತುಂಬುತ್ತಾರೆ, ವಿಷ ತುಂಬುವುದಕ್ಕೂ ಇತಿಮಿತಿ ಇರಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಸರ್ಕಾರ ದೇವಸ್ಥಾನಗಳ ಹುಂಡಿಗೆ ಕನ್ನ ಹಾಕುತ್ತಿದೆ ಎಂಬ ಬಿಜೆಪಿ ಆರೋಪದ ವಿಚಾರವಾಗಿ ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ರೈತರಿಗೆ ತೊಂದರೆಯಾಗುತ್ತಿದೆ, ಅವರು ಹಿಂದುಗಳಲ್ಲವೇ? ಎಂದರು.
ಜಗತ್ತಿನಲ್ಲಿ ಸುಳ್ಳು ಎಲ್ಲಿದೆ ಎಂದು ಪ್ರಶ್ನೆ ಮಾಡಿದರೆ, ಆ ಸುಳ್ಳು ಬಿಜೆಪಿಯವರ ಬಾಯಲ್ಲಿ ಸಿಗುತ್ತದೆ.
ಬಿಜೆಪಿಯವರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದರೆ ಏನೂ ಬೇಕಾದರೂ ಹೇಳಲು ತಯಾರಾಗಿದ್ದಾರೆ. ಒಂದು ಕೋಟಿ ಆದಾಯ ಇರುವ ದೇವಸ್ಥಾನಗಳು 10 % ಧಾರ್ಮಿಕ ಪರಿಷತ್ ಗೆ ನೀಡುವಂತೆ ಮಾಡಿದ್ದೇವೆ ಎಂದು ಹೇಳಿದರು.
ಬಿಜೆಪಿ ವಿಜಯೇಂದ್ರ ಅವರಿಗೆ ಕಳಕಳಿ ಕಾಳಜಿ ಇದ್ದಿದ್ದರೆ ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್, ಸದಾನಂದಗೌಡ ಸಿಎಂ ಆಗಿದ್ದರು. ಆಗ ಯಾಕೆ ಕಾನೂನು ವಾಪಸ್ ಪಡೆಯಲಿಲ್ಲ, ರದ್ದು ಮಾಡಲಿಲ್ಲ ಎಂದು ಪ್ರಶ್ನಿಸಿದರು.