*ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ*
*ಬೋರವೆಲ್, ಟ್ರಾಂಕರ್ ಮೂಲಕ ನೀರು ಪೂರೈಕೆ : ತಿಮ್ಮಾಪೂರ
ನಿಮ್ಮ ಸುದ್ದಿ ಬಾಗಲಕೋಟೆ
ಮಳೆಯ ಅಭಾವದಿಂದ ಕುಡಿಯುವ ನೀರಿನ ಭವನೆಯನ್ನು ನೀಗಿಸಲು ಜಿಲ್ಲೆಯಲ್ಲಿ ಹೊಸದಾಗಿ 35 ಬೋರ್‍ವೆಲ್‍ಗಳನ್ನು ಕೊರೆಯಿಸಲಾಗಿದ್ದು, 5 ಗ್ರಾಮಗಳಿಗೆ ಟ್ಯಾಂಕರ್‍ಗಳ ಮುಖಾಂತರ ನೀರು ಪೂರೈಸಲಾಗುತ್ತಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹಾಗೂ ಸಂಬಂದಪಟ್ಟ ಅಧಿಕಾರಿಗಳ ಜೊತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಮೊದಲ ಆದ್ಯತೆ ನೀಡಲಾಗುತ್ತಿದ್ದು, ಜಿಲ್ಲೆಯಾದ್ಯಂತ ಈಗಾಗಲೇ 35 ಬೋರ್‍ವೆಲ್‍ಗಳನ್ನು ಕೊರೆಯಿಸಲಾಗಿದೆ. ಅದರಲ್ಲಿ 30 ಯಶಸ್ವಿಯಾಗಿದ್ದು, 5 ಮಾತ್ರ ವಿಫಲವಾಗಿವೆ ಎಂದರು.
ಜಿಲ್ಲೆಯ ಬೀಸನಾಳಕೊಪ್ಪ, ಜಮಖಂಡಿ ಹಾಗೂ ಆಲಗೂರ ಸೇರಿದಂತೆ ಒಟ್ಟು 5 ಗ್ರಾಮಗಳಲ್ಲಿ 27 ಕುಡಿಯುವ ಟ್ಯಾಂಕರ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ 15-20 ದಿನಗಳ ನೀರಿನ ತೊಂದರೆಯಾಗಬಹುದಾಗಿದ್ದು, ಈ ಬಗ್ಗೆ ಕ್ರಮವಹಿಸಲಾಗುತ್ತಿದೆ. ತಕ್ಕಮಟ್ಟಿಗೆ ಕುಡಿಯುವ ನೀರನನ್ನು ಸಮರ್ಥವಾಗಿ ನಿಭಾಯಿಸುವ ಕಾರ್ಯ ಮಾಡಲಾಗಿದೆ. ಮುಂದೆ ಮಳೆಯಾಗುಬಹುದು ಎಂಬ ಆಶಾಭಾವನೆ ಹೊಂದಿದ್ದು, ಆಗದಿದ್ದಲ್ಲಿ ಈಗಾಗಲೇ ಜಿಲ್ಲಾಡಳಿತದಿಂದ ಸರಕಾರಕ್ಕೆ 5.67 ಕೋಟಿ ರೂ.ಗಳ ಪ್ರಸ್ತಾವನೆ ಹೋಗಿದ್ದು, ಆದಷ್ಟು ಬೇಗನೆ ಹಣ ಬಿಡುಗಡೆ ಮಾಡಿಸಲಾಗುವುದೆಂದು ತಿಳಿಸಿದರು.
ಮುಧೋಳದಲ್ಲಿ ಹಿಪ್ಪರಗಿ ಬ್ಯಾರೇಜನಿಂದ ಇನ್ನು 15 ದಿನಗಳ ವರೆಗೆ ನೀರು ಪೂರೈಕೆಯಾಗಲಿದೆ. ಸಮಸ್ಯೆ ಇರುವದಿಲ್ಲ. ನದಿಯಲ್ಲಿ ನೀರು ಕಡಿಮೆ ಇರುವ ಹಿನ್ನಲೆಯಲ್ಲಿ ನೀರನ್ನು ಎತ್ತುವಾಗ ಕಲುಷಿತಗಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ತೊಂದರೆಯಾಗದಂತೆ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೀರಿನ ಸಮಸ್ಯೆಯಾಗದಂತೆ ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡು ನೀರಿನ ಅಭಾವ ಉಂಟಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಜಿಲ್ಲೆಯ ಜನತೆಗೆ ಯಾವುದೇ ರೀತಿಯ ನೀರಿನ ಅಭಾವ ಕಂಡುಬರದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮುಂಗಾರು ವಿಫಲವಾಗಿದ್ದು, ಬಾಗಲಕೋಟೆ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಕ್ರಮವಹಿಸುವಂತೆ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಎಚ್.ವಾಯ್.ಮೇಟಿ, ಜೆ.ಟಿ.ಪಾಟೀಲ, ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಜಿ.ಪಂ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಉಪವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ, ಸಂತೋಷ ಕಾಮಗೌಡ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.