ಬೆಂಗಳೂರು: ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಸರ್ಕಾರ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗವನ್ನು ಅಲ್ಪಸಂಖ್ಯಾತರ ಇಲಾಖೆಗೆ ನೀಡಿದೆ. ಈ ಆದೇಶವನ್ನು ಕೂಡಲೇ ರದ್ದು ಮಾಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಕಳೆದ ಒಂಬತ್ತು ತಿಂಗಳಿಂದ ಅಲ್ಪಸಂಖ್ಯಾತರನ್ನು ಓಲೈಸುವ ನಿರ್ಧಾರಗಳನ್ನೇ ಮಾಡುತ್ತಿದ್ದು, ಮತಕ್ಕಾಗಿ ಸರ್ಕಾರದ ಆಸ್ತಿಗಳನ್ನು ಅಲ್ಪಸಂಖ್ಯಾತರ ಇಲಾಖೆಗೆ ವರ್ಗಾವಣೆ ಮಾಡಲಾಗುತ್ತಿದೆ. ಕುವೆಂಪು ವಾಣಿ ತೆಗೆದುಹಾಕುವ, ನಾಡಗೀತೆ ಕಡ್ಡಾಯದಿಂದ ವಿನಾಯಿತಿ ನೀಡುವ, ಪಾಕಿಸ್ತಾನಕ್ಕೆ ಜೈಕಾರ ಹಾಕಲು ಅವಕಾಶ ಮಾಡುವಂತಹ ನೀಚ ಕೆಲಸಗಳನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಸುಮಾರು 500 ಕೋಟಿ ರೂ. ಬೆಲೆಬಾಳುವ, ಮೈಸೂರು ರಸ್ತೆಯ ಬಳಿಯಲ್ಲಿರುವ, ಚಾಮರಾಜಪೇಟೆಯ ಭೂಮಿ ಅಲ್ಪಸಂಖ್ಯಾತರ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು, ವಕ್ಫ್ ಮಂಡಳಿಯವರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಲೂಟಿ ಹೊಡೆದಿದ್ದು, ಅದೇ ಭೂಮಿಯನ್ನು ಅಲ್ಪಸಂಖ್ಯಾತರ ಇಲಾಖೆಗೆ ನೀಡಬಹುದಿತ್ತು ಎಂದರು.
ಅದನ್ನು ಬಿಟ್ಟು ಅಲ್ಪಸಂಖ್ಯಾತರನ್ನು ಓಲೈಸಲು ಪಶುಸಂಗೋಪನೆ ಇಲಾಖೆಯ ಜಾಗವನ್ನು ಲೂಟಿ ಮಾಡಬಾರದು ಎಂದರು.ದೇವಸ್ಥಾನಗಳ ಹುಂಡಿಯಿಂದ ಹಣ ತೆಗೆದಿದ್ದು, ಈಗ ಪಶುಸಂಗೋಪನೆ ಇಲಾಖೆಗೂ ಕನ್ನ ಹಾಕಲಾಗಿದೆ. ಹೀಗೆ ಮಾಡಿದರೆ ಪಶುಗಳ ಆರೈಕೆ, ಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಪಶುಗಳ ಚಿಕಿತ್ಸೆಗೆ ದೂರದ ಕೆಂಗೇರಿಗೆ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.