- ಆಲಮಟ್ಟಿ:ಒಂದೆಡೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಆಲಮಟ್ಟಿ ಜಲಾಶಯದ ನೀರು… ಅದರ ಅನತಿ ದೂರದಲ್ಲಿಯೇ ಹಸಿರು ಉದ್ಯಾನದೊಳಗೆ ಅರಳಿದ ಕೆಂಗುಲಾಬಿಗಳು…ನೋಡಿದ ಕ್ಷಣ ಮೈ ರೋಮಾಂಚನದ ಜತೆ ಗುಲಾಬಿಯ ಆಕರ್ಷಣೆಗೆ ಮರುಳಾಗದ ಜನರೇ ಇಲ್ಲ…
ಆಲಮಟ್ಟಿಯ 77 ಎಕರೆ ಉದ್ಯಾನಗಳ ಸಮುಚ್ಛಯದ ಲೇಸರ್ ಫೌಂಟೇನ್ ಪಕ್ಕ, ಜಲಾಶಯದಿಂದ ಅನತಿ ದೂರದಲ್ಲಿ ಸುಮಾರು ಎರಡು ಎಕರೆ ವಿಸ್ತಾರದಲ್ಲಿ ಹರಡಿರುವ ರೋಸ್ ಉದ್ಯಾನದಲ್ಲಿ ಗುಲಾಬಿಗಳು ಅರಳಿದ್ದು, ಸದ್ಯ ಪ್ರವಾಸಿಗರನ್ನು ಅದರಲ್ಲಿಯೂ ಪ್ರೇಮಿಗಳು ಗಮನಸೆಳೆಯುತ್ತಿದೆ.
ಈ ಕೆಂಗುಲಾಬಿ ಉದ್ಯಾನದಲ್ಲಿ ಗುಲಾಬಿಗಳು ಅರಳಿ ನಳನಳಿಸುತ್ತಿವೆ. ಮೈಮನಸೂರೆಗೊಳ್ಳುವ ಈ ನಾನಾ ವರ್ಣದ ಗುಲಾಬಿಗಳಲ್ಲಿ ಸದ್ಯ ಕೆಂಗುಲಾಬಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಜನ ತಾಜಾ ಹೂವುಗಳನ್ನು ಕಂಡು ಪುಳುಕಿತಗೊಳ್ಳುತ್ತಿದ್ದಾರೆ.ವಿವಿಧ ವರ್ಣದ, ವಿವಿಧ ತಳಿಗಳ ಗುಲಾಬಿಗಳು:-
ಸುಮಾರು ಎರಡು ಎಕರೆ ವಿಸ್ತಾರದಲ್ಲಿ ವಿವಿಧ ತಳಿಗಳ ಗುಲಾಬಿಗಳನ್ನು ಇಲ್ಲಿ ಬೆಳೆಸಲಾಗಿದೆ. ದೊಡ್ಡದಾದ ಗುಲಾಬಿಯನ್ನು ಅರಳಿಸುವ ಹೈಬ್ರಿಟ್ ಟಿ ರೋಸೆಸ್, ಗೊಂಚಲಿನಲ್ಲಿನ ಚಿಕ್ಕ ಚಿಕ್ಕ ಗುಲಾಬಿಯ ಫ್ಲೋರಿಬಂಡಾ ಮಾದರಿ, ಒಂದೇ ಗುಲಾಬಿಯಲ್ಲಿ ಬೇರೆ ಬೇರೆ ವರ್ಣಗಳುಳ್ಳ ರೋಸ್ ಸ್ಪ್ರೇ ತಳಿ, ಚಿಕ್ಕ ಚಿಕ್ಕ ಬಟನ್ ರೋಸೆಸ್, ಗ್ಲೇಡಿಯೇಟರ್, ಈ ರೀತಿ ನಾನಾ ತಳಿಗಳ ಸುಮಾರು 2800 ಕ್ಕೂ ಅಧಿಕ ಗುಲಾಬಿ ಸಸ್ಯಗಳನ್ನು ಇಲ್ಲಿ ಬೆಳೆಸಲಾಗಿದೆ. ಕೆಂಪು, ಹಳದಿ, ಬಿಳಿ, ಗುಲಾಬಿ, ಸಫೋಲಾ ಆರೇಂಜ್ ಸೇರಿದಂತೆ ಇದರಲ್ಲಿಯೇ ನಾನಾ ವರ್ಣದ ಬಣ್ಣ ಬಣ್ಣದ ಗುಲಾಬಿಗಳು ಇಲ್ಲಿವೆ ಎಂದು ವಲಯ ಅರಣ್ಯಾಧಿಕಾರಿ ಮಹೇಶ ಪಾಟೀಲ ಮಾಹಿತಿ ನೀಡಿದರು.
ಅಧಿಕ ಶ್ರಮ, ಸತತ ನಿಗಾ:
ಸತತ ತಾಜಾ ಕಾಣಿಸಿ ಪ್ರವಾಸಿಗರನ್ನು ಆಕರ್ಷಿಸುವ ಹಾಗೆ ಗುಲಾಬಿಗಳನ್ನು ಬೆಳೆಸುವುದು ಸವಾಲಿನ ಕೆಲಸ.. ಸತತ ನಿಗಾ ಅಗತ್ಯ. ಒಂದೊಂದು ಗುಲಾಬಿ ಗಿಡಕ್ಕೆ ತಕ್ಕಂತೆ ಅಗತ್ಯ ಗೊಬ್ಬರ, ರಾಸಾಯನಿಕ ಸಿಂಪಡಣೆ, ಕಟ್ಟಿಂಗ್ಸ್ ಸೇರಿದಂತೆ ನಾನಾ ಕೆಲಸ ನಿರ್ವಹಿಸಲಾಗುತ್ತದೆ ಎಂದು ಗಸ್ತು ಅರಣ್ಯಪಾಲಕಿ ವಿಜಯಲಕ್ಷ್ಮಿ ರೆಡ್ಡಿ ಹೇಳಿದರು.
ಪ್ರತಿ ವರ್ಷ ಮೇ ತಿಂಗಳಲ್ಲಿ ಮತ್ತು ನವೆಂಬರ್ ನಲ್ಲಿ ಗುಲಾಬಿ ಸಸಿಗಳ ಕಟ್ಟಿಂಗ್ಸ್ ಮಾಡಲಾಗುತ್ತದೆ. ಕಟ್ಟಿಂಗ್ಸ್ ಮಾಡಿದ 15 ದಿನದಲ್ಲಿಯೇ ಮೊಗ್ಗು ಬೆಳೆದು ಮುಂದಿನ ತಿಂಗಳಲ್ಲಿಯೇ ಗುಲಾಬಿ ಅರಳುತ್ತದೆ. ಗುಲಾಬಿಯನ್ನು ಹರಿಯುವುದಿಲ್ಲ. ಅಲ್ಲಿಯೇ ದಳಗಳು ಉದುರಿ ಬೀಳುತ್ತವೆ, ಮೂರು ತಿಂಗಳವರೆಗೂ ಗುಲಾಬಿ ಅರಳುತ್ತವೆ.. ಆದರೆ ಮೊದಲು ಅರಳಿದಷ್ಟು ಗುಣಮಟ್ಟವೂ ಇರಲ್ಲ ಎಂದು ಉಪ ವಲಯ ಅರಣ್ಯಾಧಿಕಾರಿ ಸತೀಶ ಗಲಗಲಿ ತಿಳಿಸಿದರು.ಈ ಗುಲಾಬಿ ಹೂವು ನಿನಗಾಗಿ, ಚೆಲ್ಲುವ ಪರಿಮಳ ನಿನಗಾಗಿ ಎನ್ನುವಂತೆ ಕೇವಲ ಪ್ರೇಮಿಗಳಲ್ಲದೇ ಎಲ್ಲರ ಆಕರ್ಷಣೀಯ ತಾಣವಾಗಿದೆ ಈ ರೋಸ್ ಗಾರ್ಡ್ ನ್..
ಒಂದೆಡೆ ಬೋರ್ಗರೆಯುವ ಕೃಷ್ಣೆಯ ನೀರು, ಮತ್ತೊಂದೆಡೆ ಹಸಿರು ಉದ್ಯಾನದಲ್ಲಿ ನಳನಳಿಸುವ ಗುಲಾಬಿ ನೋಡಿದರೆ ಸ್ವರ್ಗವೇ ಧರಿಗಿಳಿದ ಹಾಗೆ ಅನಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹಾಗೂ ಪ್ರವಾಸಿಗ ಬಾಗಲಕೋಟೆಯ ಬಾಳಪ್ಪ ನಾಯಕ ಮತ್ತೀತರರು ಅಭಿಪ್ರಾಯಪಟ್ಟರು.
Nimma Suddi > Local News > ಈ ಗುಲಾಬಿ ನಿನಗಾಗಿ…..
ಈ ಗುಲಾಬಿ ನಿನಗಾಗಿ…..
Nimma Suddi Desk.07/08/2023
posted on
Leave a reply