ಕೊಡಿಗೇನಹಳ್ಳಿ : ಈ ವರ್ಷ ಮಳೆ ಕೊರತೆ ಮತ್ತು ತಾಪಮಾನ ಹೆಚ್ಚಳದಿಂದ ಬಹುತೇಕ ಬೆಳೆಗಳಿಗೆ ಹಾನಿಯಾಗಿದ್ದು, ಇದೀಗ ಮಾವಿನ ಮಾರುಕಟ್ಟೆಗೆ ದೊಡ್ಡ ಹೊಡೆತ ಬಿದ್ದಿದೆ.
ತುಮಕೂರು ಜಿಲ್ಲೆಯಲ್ಲಿ ಸುಮಾರು 2023-24ನೇ ಸಾಲಿನಲ್ಲಿ 15,442 ಹೆಕ್ಟೇರ್ ಮಾವು ಬೆಳೆದಿದ್ದು, ಈ ಬಾರಿ 2.5 ಲಕ್ಷ ಟನ್ ಬೆಳೆಯನ್ನು ನಿರೀಕ್ಷಿಸಲಾಗಿತ್ತು. ಆದರೆ, ಈ ಬಾರಿ ಉಷ್ಣಾಂಶ ಹೆಚ್ಚಾದ ಪರಿಣಾಮ ಇಳುವರಿ ಮತ್ತು ಗುಣಮಟ್ಟ ಇಳಿಕೆಯಾಗಿದ್ದು, ಪರಿಣಾಮ 1.60 ಲಕ್ಷ ಟನ್ ಮಾವಿನ ಬೆಳೆ ನಿರೀಕ್ಷಿಸುವಂತಾಗಿದೆ.
ಈ ಬಾರಿ ಮಳೆ ಕಡಿಮೆಯಾಗಿರುವುದು ಮತ್ತು ತಾಪಮಾನ ಹೆಚ್ಚಳದಿಂದ ಮಾವಿನ ಇಳುವರಿಯಲ್ಲಿ ಇಳಿಕೆಯಾಗಿದೆ. ಇತ್ತೀಚಿಗೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಬೂದು ರೋಗ ಮತ್ತು ಅಂಥ್ರಾಕೊನೋಸ್ ರೋಗ ಮಾವಿನ ಬೆಳೆಗೆ ಕಂಡುಬಂದಿದೆ. ಜಿಲ್ಲೆಯಲ್ಲಿ ಕೇಸರ್ ಮತ್ತು ಅಲ್ಫಾನ್ಸೋ ತಳಿಯ ಮಾವು ಹೆಚ್ಚಾಗಿ ಬೆಳೆಯಲಾಗುತ್ತದೆ. ಕೆಲವೆಡೆ ಆಪೂಸ್ ಮತ್ತು ಮಲ್ಲಿಕಾ ತಳಿಗಳನ್ನು ರೈತರು ಬೆಳೆಯುತ್ತಿದ್ದಾರೆ.
ಮಾವು ಬೆಳೆಗಾರರು ಮತ್ತು ಗ್ರಾಹಕರಿಗೆ ನೇರ ಸಂಪರ್ಕ ಕಲ್ಪಿಸುವುದರ ಜತೆಗೆ ಗ್ರಾಹಕರಿಗೆ ರಾಸಾಯನಿಕ ಮುಕ್ತ ಮಾವು ದೊರಕಿಸಲು ಪ್ರತಿ ವರ್ಷ ಮಾವು ಅಭಿವೃದ್ಧಿ ಮಂಡಳಿಯು ಮ್ಯಾಂಗೋ ಪಿಕಿಂಗ್ ಟೂರ್ ಆಯೋಜಿಸುತ್ತಿತ್ತು. ಮ್ಯಾಂಗೋ ಪಿಕಿಂಗ್ ಟೂರ್ ರೈತರಿಗೆ ಯಾವುದೇ ದಳ್ಳಾಳಿ ಕಮಿಷನ್ ಮತ್ತು ಸಾಗಾಣಿಕೆ ವೆಚ್ಚವಿಲ್ಲದೆ ಸ್ಥಳದಲ್ಲೇ ಮಾವು ಮಾರಾಟ ಮಾಡಿ ನೇರವಾಗಿ ಹಣ ಪಡೆಯಲು ಸಹಕಾರಿಯಾಗಿತ್ತು.
ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೇಡಿಕೆ ಹೆಚ್ಚಾಗಿದ್ದು ಈ ಬಾರಿ ಮಾವಿಗೆ ಬಂಪರ್ ಬೆಲೆ ಇದೆ. ಆದರೆ ಬೆಳೆ ಕುಸಿತ ಕಂಡಿದ್ದು ಮಾವಿನ ಬೆಳೆ ಒಂದು ವರ್ಷ ಹೆಚ್ಚಾದರೆ ಮರು ವರ್ಷ ಕಡಿಮೆ ಬರುತ್ತದೆ. ಕಳೆದ ವರ್ಷ ಜಿಲ್ಲೆಯಲ್ಲಿ ಮಾವಿನ ಹೂ ಉತ್ತಮವಾಗಿ ಚಿಗುರಿತ್ತು. ಆದರೆ ವಿಪರೀತ ಮಳೆಯಾಗಿ ಹೂ ಉದುರಿ ಬೆಳೆ ನೆಲಕಚ್ಚಿತ್ತು. ಈ ಬಾರಿ ಮಳೆಯಿಲ್ಲದ ಕಾರಣ ಹೂ ಕಡಿಮೆ ಜತೆಗೆ ಹಣ್ಣು ಕೂಡ ಕಡಿಮೆಯಾಗಿದೆ.