ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರದಿಂದ ಟಿಕೆಟ್ ನೀಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಅವರ ವಿರುದ್ಧ ಗೋಬ್ಯಾಕ್ ಅಭಿಯಾನ ತೀವ್ರಗೊಂಡಿದ್ದು, ಹೈಕಮಾಂಡ್ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರವನ್ನು ನೀಡಿದೆ. ಈ ಮಧ್ಯೆ, ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ ನಾಯಕ ಸಿಟಿ ರವಿ ವಿರುದ್ಧ ಶೋಭಾ ಕರಂದ್ಲಾಜೆ ಪರೋಕ್ಷ ವಾಗ್ದಾಳಿ ನಡೆಸಿದ್ದು, ವಿರೋಧಿಸುವವರಿಗೆ ಟಿಕೆಟ್ ಸಿಗುವುದಿಲ್ಲ ಎಂದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. ಆದರೆ, ಕೆಲವರು ಅದನ್ನು ವಿರೋಧಿಸಿದ್ದಾರೆ. ಕೆಲವರು ಪ್ರಾಯೋಜನೆ ಮಾಡಿ ವಿರೋಧಿಸುವಂತೆ ಮಾಡಿದರು. ಆದರೆ, ಹಾಗೆ ಮಾಡಿದವರು ಕೂಡ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ವಿರೋಧ ಮಾಡುವವರಿಗೆ ಟಿಕೆಟ್ ಸಿಗಲ್ಲ. ಇನ್ನಾದರೂ ವಿರೋಧ ಮಾಡುವವರು ಪಾಠ ಕಲಿಯಬೇಕು. ಪಕ್ಷ ವಿರೋಧಿಸುವವರಿಗೆ ಹೈಕಮಾಂಡ್ ಮಣೆ ಹಾಕಲ್ಲ ಎಂದು ಶೋಭಾ ವಾಗ್ದಾಳಿ ನಡೆಸಿದರು
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಗೋಬ್ಯಾಕ್ ಅಭಿಯಾನ ತೀವ್ರಗೊಂಡಿತ್ತು. ಇದನ್ನು ಸಿಟಿ ರವಿ ಬೆಂಬಲಿಗರೇ ಮಾಡಿಸುತ್ತಿದ್ದಾರೆ ಎನ್ನಲಾಗಿತ್ತು. ಆದಾಗ್ಯೂ ಆ ಕ್ಷೇತ್ರದಿಂದಲೇ ಟಿಕೆಟ್ ಪಡೆಯಲು ಶೋಭಾ ಯತ್ನ ಮಾಡಿದ್ದರು. ಅಂತಿಮವಾಗಿ ಅವರಿಗೆ ಬೆಂಗಳೂರು ಉತ್ತರದಿಂದ ಟಿಕೆಟ್ ಘೋಷಣೆ ಮಾಡಿರುವ ಹೈಕಮಾಂಡ್, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿದೆ ಎಂದು ಮಾಹಿತಿ ಕಂಡು ಬಂದಿದೆ.