ಬೆಂಗಳೂರು: ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರೈಸಿದೆ. ಸಾವಿರಾರು ಹತ್ಯೆ, ಆತ್ನಹತ್ಯೆಗಳೇ ಕಾಂಗ್ರೆಸ್ ಸಾಧನೆಯಾ? ಎಂದು ಮಾಜಿ ಸಚಿವ ಸಿಟಿ ರವಿ ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಎನ್ಸಿಬಿಆರ್ ವರದಿ ಪ್ರಕಾರ ಕಳೆದ ನಾಲ್ಕು ತಿಂಗಳಲ್ಲಿ 430 ಕೊಲೆ ಹಾಗೂ 700 ಕ್ಕೂ ಅಧಿಕ ರೈತರ ಆತ್ಮಹತ್ಯೆ ನಡೆದಿವೆ. ಇಷ್ಟೆಲ್ಲ ಇದ್ದ ಮೇಲೆ ಈ ಸರ್ಕಾರ ಹತ್ಯೆ ಮತ್ತು ಆತ್ಮಹತ್ಯೆಯಲ್ಲಿ ಪ್ರತೀ ತಿಂಗಳು ಶತಕದ ಗಡಿ ದಾಟಿದೆ ಎಂದು ಕಿಡಿಕಾರಿದರು.
ನಮ್ಮ ಸರ್ಕಾರದ ವಿರುದ್ಧ ಕಾಂಗ್ರೆಸ್ 40% ಆಪಾದನೆ ಮಾಡಿತ್ತು. ಆ ಮೂಲಕ ಬಿಜೆಪಿ ವಿರುದ್ಧ ಒಂದು ನರೇಷನ್ ಸೆಟ್ ಮಾಡಿದ್ದರು. ಈಗ ಕೆಲವು ಆರೋಪಗಳ ಕುರಿತು ಸಮಿತಿ ರಚಿಸಿದ್ದೀರಿ, ಒಂದು ವರ್ಷವಾದರೂ ವರದಿಗಳು ಬಂದಿಲ್ಲ. ನಿಮ್ಮದು ಒಂದು ಸರ್ಕಾರ, ನೂರಾರು ಗೊಂದಲ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಕೋವಿಡ್ ಅವಧಿಯ ಅಕ್ರಮಗಳ ತನಿಖೆಗೆ ನ್ಯಾಯಾಂಗ ಸಮಿತಿ ರಚಿಸಿದ್ದು ವರದಿ ಬಂತಾ?, ಜಲಜೀವನ್ ಮಿಷನ್ ಅಡಿ ನಡೆದ ಅಕ್ರಮಗಳ ತನಿಖೆಗೂ ಸಮಿತಿ ರಚಿಸಿದ್ದು, ಆ ವರದಿ ಬಂದಿದ್ಯಾ? ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ, ಬಿಬಿಎಂಪಿ ಗುತ್ತಿಗೆ ಕಮೀಷನ್, ಬಿಟ್ ಕಾಯಿನ್ ಪ್ರಕರಣಗಳ ತನಿಖೆಯ ವರದಿಗಳು ಬಂದಿವೆಯಾ? ಎಂದರು.