ಬಾಗಲಕೋಟೆ:
ತೋಟಗಾರಿಕೆ ವಿವಿಯ ಉದ್ಯಾನಗಿರಿಯಲ್ಲಿ ಆರ್ಥಿಕತೆ ಹಾಗೂ ಪೌಷ್ಟಿಕತೆಗಾಗಿ ತೋಟಗಾರಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ಡಿಸೆಂಬರ 21 ರಿಂದ 23 ವರೆಗೆ ಮೂರು ದಿನಗಳ ಕಾಲ ತೋಟಗಾರಿಕೆ ಮೇಳ-2024 ಹಮ್ಮಿಕೊಳ್ಳಲಾಗಿದೆ ಎಂದು ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.
ತೋವಿವಿಯ ವಿಸ್ತರಣಾ ನಿರ್ದೇಶನಾಲಯದಲ್ಲಿ ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ತೋಟಗಾರಿಕೆ ಮೇಳವು ರೈತರಲ್ಲಿ ಅಪೇಕ್ಷಿತ ಧನಾತ್ಮಕ ಬದಲಾವಣೆ ತರುವ ಅವಕಾಶವನ್ನು ಒದಗಿಸುತ್ತಿದ್ದು, ಪ್ರತಿ ವರ್ಷ ಒಂದೊAದು ಧ್ಯೇಯ ವಾಕ್ಯಗಳೊಂದಿಗೆ ತೋಟಗಾರಿಕೆ ಮೇಳ ಆಚರಿಸುತ್ತಾ ಬರಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ವಿಶ್ವ ವಿದ್ಯಾಲಯದ ವ್ಯಾಪ್ತಿಯ 24 ಜಿಲ್ಲೆಗಳಿಂದ ಗುರುತಿಸಲ್ಪಟ್ಟ ಸಾಧಕ ರೈತರಾದ ಫಲಶ್ರೇಷ್ಟರನ್ನು ತೋಟಗಾರಿಕೆ ಮೇಳದ ಮೂರು ದಿನಗಳಲ್ಲಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ತೋಟಗಾರಿಕೆ ಮೇಳವು ರೈತರಲ್ಲಿ ಧನಾತ್ಮಕ ಬದಲಾವಣೆ ತರುವ ಒಂದು ಅವಕಾಶವನ್ನು ಒದಗಿಸುತ್ತಿದ್ದು, ಪ್ರತಿ ವರ್ಷವು ಮೇಳವು ಉದ್ದೇಶಿತ ಧ್ಯೇಯವನ್ನು ಹೊಂದಿದೆ. ಪೌಷ್ಟಿಕತೆಗಾಗಿ ತೋಟಗಾರಿಕೆ ಬೆಳೆಗಳು, ಸಸ್ಯ ಸಂರಕ್ಷಣೆಯಲ್ಲಿ ಡ್ರೋನಗಳ ಬಳಕೆ, ತೋಟಗಾರಿಕೆಯಲ್ಲಿ ನಿಖರ ಬೇಸಾಯ, ಸಂರಕ್ಷಿತ ಬೇಸಾಯ, ನೀರು ಸಂರಕ್ಷಣೆಗಾಗಿ ತಂತ್ರಜ್ಞಾನ, ಆರ್ಥಿಕತೆಗಾಗಿ ಪರ್ಯಾಯ ಬೆಳೆಗಳ ಆಯ್ಕೆ, ಸ್ವಯಂ ಚಾಲಿತ ನೀರಾವರಿ ವ್ಯವಸ್ಥೆ ಮತ್ತು ರಸಾವರಿ ಮಾದರಿ ಮುಂತಾದ ಧ್ಯೇಯಗಳಿಟ್ಟುಕೊಂಟು ಹಿಂದಿನ ವರ್ಷಗಳಲ್ಲಿ ಆಚರಿಸಿದ ಮೇಳಗಳಲ್ಲಿ ಭಾಗವಹಿಸಿ ಲಕ್ಷಾನುಗಟ್ಟಲೇ ರೈತರು ರೈತ ಉದ್ಯಮಿಗಳು, ಭಾಗಿದಾರರಿಗೆ ಮತ್ತು ಸಾರ್ವಜನಿಕರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡಿವೆ ಎಂದು ಹೇಳಿದರು.
ಮೇಳದಲ್ಲಿ ವಿಶೇಷವಾಗಿ ಖುಷ್ಕಿ ತೋಟಗಾರಿಕೆಯ ಪ್ರಾತ್ಯಕ್ಷಿಕೆಗಳು, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮುಖ್ಯ ತೋಟಗಾರಿಕೆ ಬೆಳೆಗಳ ಸಮುಚ್ಛಯಗಳನ್ನು ಏರ್ಪಡಿಸಲಾಗಿದೆ. ದಾಳಿಂಬೆ, ದ್ರಾಕ್ಷಿ ಬೆಳೆ, ತೋಟಪಟ್ಟಿ, ಔಷಧಿ ಮತ್ತು ಸುಗಂಧದ್ರವ್ಯ ಬೆಳೆಗಳ ಸಮುಚ್ಛಯ, ಡಿಜಿಟಲ್ ತೋಟಗಾರಿಕೆ ತಂತ್ರಜ್ಞಾನಗಳ ಸಮುಚ್ಛಯ, ಮೈಕ್ರೋಗ್ರಿನ್ಸ್ ತಂತ್ರಜ್ಞಾನ, ಹೊಸ ತೋಟಗಾರಿಕೆ ಬೆಳೆಗಳ ಮಾಹಿತಿ ಕೇಂದ್ರ, ಆನ್‌ಲೈನ್ ಮೂಲಕ ಸಮಗ್ರ ದಿಢೀರ ಮಾಹಿತಿ ಕೊಡುವ ಕ್ಯೂಆರ್ ಕೋಡ್‌ಗಳನ್ನು ಆಯಾ ಪ್ರಾತ್ಯಕ್ಷಿಕೆಗಳಲ್ಲಿ ಅಳವಡಿಸಲಾಗಿದೆ ಎಂದರು.
ತೋಟಗಾರಿಕೆಯ ತರಕಾರಿ ಬೆಳೆಗಳ, ಹೂವಿನ, ಹಣ್ಣಿನ ವಿವಿಧ ತಳಿಗಳ, ಕೊಯ್ಲೋತ್ತರ ತೋಟಗಾರಿಕಾ ಉತ್ಪನ್ನಗಳ ಪ್ರದರ್ಶನ, ಕ್ಷೇತ್ರ ಭೇಟಿ, ಪ್ರಾತ್ಯಕ್ಷಿಕೆ, ಭಿತ್ತಿಚಿತ್ರ, ವಿಡಿಯೋ ಮುಂತಾದವುಗಳ ಮೂಲಕ ತಂತ್ರಜ್ಞಾನದ ಮಾಹಿತಿ ನೀಡಲಾಗುತ್ತದೆ. ಸಮಗ್ರ ಕೃಷಿ ಪದ್ದತಿಯ ಅಡಿಯಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಸಮಗ್ರ ಮಾಹಿತಿಯು ದೊರೆಯತ್ತದೆ, ವಿಜ್ಞಾನಿಗಳು, ಪ್ರಗತಿಪರ ರೈತ, ರೈತ ಉದ್ಯಮಿಗಳು ಮುಂತಾದವರನ್ನು ನೇರವಾಗಿ ಭೇಟಿಯಾಗಿ ಅವರ ಯಶೋಗಾಥೆಗಳಿಂದ ಪ್ರೇರಣೆ ಪಡೆಯುವದಲ್ಲದೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ತೋಟಗಾರಿಕೆ ಮೇಳದಲ್ಲಿ ಪರಸ್ಪರ, ಗುಂಪು ಮತ್ತು ಸಮೂಹ ಸಂವಹನದ ಮೂರು ಪ್ರಕಾರಗಳನ್ನು ಉಪಯೊಗಿಸಲಾಗುತ್ತಿದೆ. ಇದರಿಂದ ತಂತ್ರಜ್ಞಾನದ ಅಳವಡಿಕೆಗೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ತಿಳಿಸಿದರು.
ತೋಟಗಾರಿಕೆ ಮೇಳವು ಪ್ರಸಾರದ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ನಿಟ್ಟಿನಲ್ಲಿ ಒಂದೇ ಸೂರಿನಡಿಯಲ್ಲಿ ಪ್ರತಿ ವರ್ಷ ರೈತ ಸಮುದಾಯಕ್ಕೆ ನವೀನ, ಸಮಯೋಜಿತ ತಂತ್ರಜ್ಞಾನಗಳನ್ನು ವರ್ಗಾವಣೆ ಮಾಡಲು ತೋಟಗಾರಿಕೆ ಮೇಳವನ್ನು ಆಯೋಜಿಸಲಾಗುತ್ತಿದ್ದು, ಈ ಮೇಳದ ಆಯೋಜನೆಯ ಮುಖಾಂತರ ವಿಶ್ವವಿದ್ಯಾಲಯದ ಮುಖ್ಯ ಉದ್ದೇಶಗಳಲ್ಲೊಂದಾದ ತಂತ್ರಜ್ಞಾನದ ವರ್ಗಾವಣೆಯು ಯಶಸ್ವಿಯಾಗುವುದು. ಮೇಳದ ಪ್ರತಿದಿನವೂ ಸಾಧಕ ರೈತರ ತಮ್ಮ ಅನುಭವಗಳನ್ನು ಇತರೇ ರೈತರಿಗೆ ಹಂಚಿಕೊಳ್ಳಲಿದ್ದಾರೆ. ಜೊತೆಗೆ ವಿಜ್ಞಾನಿಗಳು, ಪ್ರಗತಿಪರ ರೈತರು ಮತ್ತು ಇತರೇ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ. ಮೇಳದಲ್ಲಿ 200ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ವಿವಿಯ ಸಂಶೋಧನಾ ನಿರ್ದೇಶಕ ಹಾಗೂ ಮೇಳದ ಅಧ್ಯಕ್ಷ ಡಾ.ಟಿ.ಬಿ.ಅಳ್ಳೊಳ್ಳಿ, ಶಿಕ್ಷಣ ನಿರ್ದೇಶಕ ಡಾ.ಎನ್.ಕೆ.ಹೆಗಡೆ, ಕುಲಸಚಿವ ಮಹಾದೇವ ಮುರಗಿ, ಪ್ರಚಾರ ಸಮಿತಿಯ ಅಧ್ಯಕ್ಷ ರಾಮಚಂದ್ರ ನಾಯಕ, ಉಪಾಧ್ಯಕ್ಷ ಶಶಿಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.