ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಕೃಷ್ಣಾ ನದಿ ತೀರದ ಘಾಳಪೂಜಿ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೊಠಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಘಟನೆಯಲ್ಲಿ 6ನೇ ತರಗತಿಯ ಓರ್ವ ವಿದ್ಯಾರ್ಥಿಗೆ ಕೈಕಾಲು ಸುಟ್ಟು ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಜಯಪುರದ ಬಿಎಲ್ಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋರ್ವ ವಿದ್ಯಾರ್ಥಿಗೆ ಮೂಗು, ಕೆನ್ನೆ, ಕಿವಿಗೆ ಝಳ ತಾಕಿದ್ದು ಪ್ರಾಥಮಿಕ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾನೆ.
ಸಾಗರ್, ಸಮರ್ಥ, ಮಲ್ಲಿಕಾರ್ಜುನ ವಿದ್ಯಾರ್ಥಿಗಳಿಗೆ ಸುಟ್ಟು ಗಾಯಗಳಾಗಿವೆ. ಇನ್ನು ಘಟನೆ ನಡೆದ ಕೊಠಡಿಯಲ್ಲಿ 18 ವಿದ್ಯಾರ್ಥಿಗಳು ರಾತ್ರಿ ಮಲಗಿದ್ದಾಗ ಏಕಾಏಕಿ ಬೆಂಕಿ ವ್ಯಾಪಿಸಿ ಈ ಅವಘಡ ಸಂಭವಿಸಿದೆ. ವಾರ್ಡನ್ ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಧಾವಿಸಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ವಸತಿ ಶಾಲೆ ಉದ್ಘಾಟನೆಯಾಗಿ ಕೇವಲ 6 ತಿಂಗಳಾಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿದೆ. ಶಾಲೆ ಉದ್ಘಾಟನೆಗೊಂಡ ಆರು ತಿಂಗಳಲ್ಲಿಯೇ ಘಟನೆ ನಡೆದಿದೆ. ಅಗ್ನಿ ಅವಘಡದಿಂದಾಗಿ ಕೋಣೆಯ ಗೋಡೆಗೆ ಆವರಿಸಿರುವ ಹೊಗೆಯನ್ನು ಸ್ವಚ್ಛ ಮಾಡುವ ಕಾರ್ಯ ನಡೆದಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.
ಇನ್ನು ಶಾಲೆಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಭೇಟಿ ನೀಡಿ ಘಟನೆಯ ಮಾಹಿತಿ ಸಂಗ್ರಹಿಸಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗೆ ವರದಿ ಸಲ್ಲಿಸಿದ್ದಾರೆ.