ಬೆಂಗಳೂರು: ರಾಜ್ಯ ಸರಕಾರವು ಕೂಡಲೇ ಮಂಡ್ಯ ಜಿಲ್ಲೆ ಕೆರೆಗೋಡಿನಲ್ಲಿ ಧ್ವಜ ಇಳಿಸಿದ ಸ್ಥಳದಲ್ಲಿ ಮತ್ತೆ ಧ್ವಜ ಹಾರಿಸಲು ಅವಕಾಶ ಕೊಡಬೇಕಿದ್ದು, ಇಲ್ಲವಾದರೆ ಬಿಜೆಪಿ ಕೆರೆಗೋಡಿನಲ್ಲಿ ಧ್ವಜ ಹಾರಿಸಲು ನಮ್ಮೆಲ್ಲ ಕಾರ್ಯಕರ್ತರಿಗೆ ಆ ಜಿಲ್ಲೆಯಲ್ಲಿ ಕರೆ ಕೊಡಬೇಕಾಗುತ್ತದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಎಚ್ಚರಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಕೆರೆಗೋಡಿನಲ್ಲಿ ನಿನ್ನೆ 108 ಅಡಿ ಕೇಸರಿ ಹನುಮಧ್ವಜವನ್ನು ಹಿಂದೂ ತರುಣ ತರುಣಿಯರು ಗ್ರಾಮ ಪಂಚಾಯತ್ ಅನುಮತಿ ಪಡೆದು ಹಾರಿಸಿದ್ದರು. ಗ್ರಾಮ ಪಂಚಾಯತ್‍ನ 22 ಸದಸ್ಯರ ಪೈಕಿ 20 ಸದಸ್ಯರು ಈ ಹನುಮಧ್ವಜ ಹಾರಿಸಿದ್ದನ್ನು ಬೆಂಬಲಿಸಿದ್ದರು ಎಂದರು.
ಈ ಸರಕಾರ ಹಿಂದೂಗಳ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಬಿಡುವುದಿಲ್ಲ. ಗಣಪತಿ ಉತ್ಸವಕ್ಕೆ ಅನುಮತಿ ಕೊಡುವುದಿಲ್ಲ. ಒಟ್ಟು ಈ ಸರಕಾರದ ಧೋರಣೆ ನೋಡಿದರೆ, ವಿನಾಶಕಾಲೇ ವಿಪರೀತ ಬುದ್ಧಿ ಎಂಬ ರೀತಿಯಲ್ಲಿ ಈ ಸರಕಾರ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸರಕಾರ ಅದನ್ನು ಏಕಾಏಕಿ ಇಳಿಸಲು ಕ್ರಮ ಕೈಗೊಂಡಾಗ, ಅದನ್ನು ವಿರೋಧಿಸಿದ್ದು, ಲಾಠಿ ಚಾರ್ಜ್ ಆಗಿದೆ. 144ನೇ ಸೆಕ್ಷನ್ ಹಾಕಿದ್ದಾರೆ. ಈ ಸರಕಾರಕ್ಕೆ ರಾಮ ಅಂದರೆ ಆಗೋಲ್ಲ. ಹನುಮ ಅಂದರೆ ಆಗೋಲ್ಲ. ಶಿವಾಜಿ ಅಂದರೆ ಆಗೋಲ್ಲ. ಸಾವರ್ಕರ್ ಅಂದರೆ ಆಗೋಲ್ಲ. ಟಿಪ್ಪು ಸುಲ್ತಾನ್ ಎಂದರೆ ಬಹಳ ಪ್ರೀತಿ. ಯಾಕೆ ಹನುಮನನ್ನು ಕಂಡರೆ ಆಗಲ್ಲ? ಯಾಕೆ ರಾಮನನ್ನು ಕಂಡರೆ ಆಗಲ್ಲ? ಮತಾಂತರ ಮಾಡಬೇಡಿ ಎಂದರೆ ಇವರಿಗೆ ಆಗಲ್ಲ. ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿ ಎಂದರೆ ಇವರಿಗೆ ಆಗಲ್ಲ. ಒಟ್ಟು ಹಿಂದೂಗಳು ಎಂದರೆ ಇವರಿಗೆ ಆಗಲ್ಲ ಎಂದು ಟೀಕಿಸಿದರು.