ವಿಮಾ ತಂತ್ರಾಂಶದ ಬಗ್ಗೆ ತರಬೇತಿ ಕಾರ್ಯಾಗಾರ
ಬಾಗಲಕೋಟೆ
:ಜಿಲ್ಲಾ ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ವಿಮಾ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಬಟವಡೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವಿಮೆಯ ನಿರ್ವಾಹಕರಿಗೆ ಹೊಸ ವಿಮಾ ವ್ಯವಹಾರದ ಬಗ್ಗೆ ಆನ್-ಲೈನ್ ತಂತ್ರಾಂಶದ ಮೂಲಕ ಬಳಕೆ ಮತ್ತು ನಿರ್ವಹಣೆ ಬಗ್ಗೆ ಒಂದು ದಿನದ ತರಬೇತಿ ಇತ್ತೀಚೆಗೆ ಜರುಗಿತು.
ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಗಂಗಾಧರ ದಿವಟರ ತರಬೇತಿ ಕಾರ್ಯಕ್ಕೆ ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಇನ್ನು ಮುಂದೆ ಹೊಸದಾಗಿ ಸೇವೇಗೆ ಸೇರುವ ನೌಕರರು ವಿಮಾ ವ್ಯವಹಾರವನ್ನು ಆನ್-ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಎಲ್ಲರೂ ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ವಿಮಾ ಅಧಿಕಾರಿಗಳಾದ ಜೆ.ಎಸ್.ವಾಘಮೋರೆ ಮಾತನಾಡಿ ಸರ್ಕಾರಿ ವಿಮಾ ಇಲಾಖೆಯ ಸಂಪೂರ್ಣ ಗಣಕೀರಕರಣ, ಕಾರ್ಯ ಹಾಗೂ ಹೊಸ ವಿಮಾ ವ್ಯವಹಾರ ಶಾಖೆಯ ಮಾಡ್ಯೂಲ್ ಪ್ರಗತಿಯಲ್ಲಿದ್ದು, ಪ್ರಾಯೋಗಿಕವಾಗಿ ಹೊಸದಾಗಿ ಸೇವೆಗೆ ನೇಮಕವಾದ ರಾಜ್ಯ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳು ವಿಮಾ ವ್ಯವಹಾರವನ್ನು ಇನ್ನು ಮುಂದೆ ಆನ್-ಲೈನ್ ಮೂಲಕವೇ ಸಲ್ಲಿಸಬೇಕಾಗಿರುವುದರಿಂದ ಎಲ್ಲ ಬಟವಡೆ ಅಧಿಕಾರಿ ಮತ್ತು ವಿಮೆಯ ನಿರ್ವಾಹಕರಿಗೆ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ವಿಮಾ ಇಲಾಖೆಯ ಸಿಬ್ಬಂದಿಯಾದ ಎಸ್.ಎನ್.ಹಿರೇಮಠ ಮಾತನಾಡಿ ಹೊಸ ವಿಮಾ (ಕೆಜಿಐಡಿ) ವ್ಯವಹಾರದ ಬಗ್ಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ ಮತ್ತು ಪರಿಶೀಲನೆಯಲ್ಲಿ ಬಟವಡೆ ಅಧಿಕಾರಿಗಳ ಪಾತ್ರ ಹಾಗೂ ಪ್ರಸ್ತಾವನೆಯನ್ನು ವಿಮಾ ಇಲಾಖೆಗೆ ಕಳುಹಿಸುವ ಬಗ್ಗೆ ಪ್ರಾಯೋಗಿಕವಾಗಿ ತರಬೇತಿಯನ್ನು ನೀಡಿದರು.
ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯ ಮಲ್ಲಿಕಾರ್ಜುನ ಗುಡೂರ, ತರಬೇತಿಗೆ ಆಗಮಿಸಿದ ಎಲ್ಲ ಪ್ರಶಿಕ್ಷಣಾರ್ಥಿಗಳನ್ನು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಸ್ವಾಗತ ಕೋರುತ್ತಾ, ಈ ತರಬೇತಿಯ ಸಮನ್ವಯಾಧಿಕಾರಿಗಳಾಗಿ ಕೆಲಸ ನಿರ್ವಹಿಸಿದರು.
ಈ ಒಂದು ದಿನದ ತರಬೇತಿಗೆ ಜಿಲ್ಲಾ ತರಬೇತಿ ಸಂಸ್ಥೆಯ ಬೋಧಕರಾದ ಸುಲೋಚನಾ ಹೊಸಟ್ಟಿ ಹಾಗೂ ವಿಮಾ ಇಲಾಖೆಯ ವ್ಯವಸ್ಥಾಪಕರಾದ ಎಸ್.ಪಿ.ಹಿರೇಮಠ ಉಪಸ್ಥಿತರಿದ್ದರು.