ನಿಮ್ಮ ಸುದ್ದಿ ಬಾಗಲಕೋಟೆ
2006ರ ನಂತರ ನೇಮಕವಾದ ರಾಜ್ಯ ಸರಕಾರಿ ನೌಕರರ ಪಾಲಿನ ದುಸ್ವಪ್ನವಾಗಿರುವ ಎನ್.ಪಿ.ಎಸ್ ಯೋಜನೆ ಅಂದರೆ, ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲು ಜೂ.26 ರಂದು ಮಧ್ಯಾಹ್ನ 12 ರಿಂದ ಸಂಜೆ 4 ರ ವರೆಗೆ ಟ್ವೀಟ್ ಮಾಡುವ ಮೂಲಕ ಹುನಗುಂದ ತಾಲೂಕಿನ ಎಲ್ಲ ಸರಕಾರಿ ನೌಕರರು ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕಾಗಿದೆ ಎಂದು ಹುನಗುಂದ ತಾಲೂಕಾ ಎನ್ ಪಿ ಎಸ್ ನೌಕರರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ ಕರೆ ನೀಡಿದ್ದಾರೆ.
ಪ್ರಕಟಣೆ ನೀಡಿರುವ ಅವರು, ರಾಷ್ಟ್ರಮಟ್ಟದ ಎನ್.ಎಂ.ಒ.ಪಿ.ಎಸ್ ಸಂಘಟನೆ ಹಾಗೂ ರಾಜ್ಯ ಸರಕಾರಿ ಎನ್ ಪಿ ಎಸ್ ನೌಕರರ ಸಂಘಟನೆಯ ಏಕೈಕ ಗುರಿಯಾಗಿರುವ ಎನ್ ಪಿ ಎಸ್ ರದ್ಧತಿ ಬೇಡಿಕೆ ಅದು ಕೊನೆಗೊಳ್ಳುವವರೆಗೂ ಜೀವಂತವಾಗಿರುತ್ತದೆ ಎಂದು ತಿಳಿಸಿದ್ದಾರೆ.
ನೌಕರರು ದುಡಿದ ಹಣವನ್ನು ಜೂಜಿಗಿಟ್ಟು ಮೋಜು ನೋಡುವಂತಿರುವ ಈ ಅನಿಶ್ಚಿತ ಪಿಂಚಣಿ ಮರುಪಾವತಿ ಹೊಂದಿರುವ ಎನ್.ಪಿ.ಎಸ್ ಯೋಜನೆಗೊಳಪಟ್ಟು ಈಗಾಗಲೇ ಮೃತರಾದ ನೌಕರರಿಗೂ ನ್ಯಾಯ ಒದಗಿಸುವ ಜೊತೆಗೆ ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವ ನೌಕರರು ಮುಂದೆ ನಿವೃತ್ತಿಯ ನಂತರ ಪರಿತಪಿಸಬಾರದೆಂಬ ದೃಷ್ಟಿಯಿಂದ ಜೂ.26 ರಂದು ನಡೆಯುವ ಈ ಟ್ವಿಟ್ಟರ್ ಜಾಲತಾಣ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಭಾಗಿಯಾಗಿ ಸರಕಾರಕ್ಕೆ ಈ ಯೋಜನೆಯ ವಿರುದ್ಧದ ಧ್ವನಿಯನ್ನು ಎತ್ತಿ ತೋರಿಸಬೇಕಾಗಿದೆ ಎಂದು ಹುನಗುಂದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಅಶೋಕ ವಿ ಬಳ್ಳಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಹೇಳಿಕೆ ನೀಡಿರುವ ಶಿಕ್ಷಕ ರಮೇಶ ಮಿಣಜಗಿ, ಶಾಸನ ಮಾಡುವ ಅಧಿಕಾರ ಹೊಂದಿರುವ ರಾಜಕಾರಣಿಗಳು ತಾವು ಐದೇ ವರ್ಷ ಜನಪ್ರತಿನಿಧಿಗಳಾಗಿದ್ದು, ನೌಕರರಲ್ಲದಿದ್ದರೂ ಹಳೆ ಪಿಂಚಣಿ ಯೋಜನೆಗೊಳಪಟ್ಟು ೩೦-೪೦ ವರ್ಷ ಸೇವೆ ಸಲ್ಲಿಸುವ ನೌಕರರಿಗೆ ಎನ್.ಪಿ.ಎಸ್ ಯೋಜನೆ ಜಾರಿ ಮಾಡಿ ನಮ್ಮ ನ್ಯಾಯಯುತ ಬೇಡಿಕೆಗೆ ಕಿವುಡಾಗಿದ್ದಾರೆ. ವಿರೋಧ ಪಕ್ಷ, ಆಡಳಿತ ಪಕ್ಷಗಳ ಬೇಧವಿಲ್ಲದೆ ಎಲ್ಲರೂ ಆಶ್ವಾಸನೆ ನೀಡಿದ್ದಾರೆಯೇ ವಿನಃ ನಮ್ಮನ್ನು ಈ ಯೋಜನೆಯಿಂದ ಬಿಡುಗಡೆಗೊಳಿಸುವ ಪ್ರಯತ್ನ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.