ಮೈಮರೆತರೆ ಜೋಕೆ!
ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್ ಪ್ರಸರಣ ಕಡಿಮೆ ಆಗುತ್ತಿರುವುದರಿಂದ ಸರಕಾರ ಅನ್‌ಲಾಕ್ ಪ್ರಕ್ರಿಯೆ ಆರಂಭಿಸಿದ್ದು ಜೂ.೧೪ರಿಂದ ೨೧ರ ವರೆಗೆ ಕೆಲ ಚಟುವಟಿಕೆಗಳಿಗೆ ರಿಯಾಯಿತಿ ನೀಡಿದೆ. ಹಾಗಂತ ಎಚ್ಚರ ತಪ್ಪಿದರೆ ಅಪಾರ ಗ್ಯಾರಂಟಿ ಎಂಬಂತಾಗಿದೆ.
ಈವರೆಗಿನ ಲಾಕ್‌ಡೌನ್ ಹಂತದಲ್ಲಿ ಪಟ್ಟಣದಲ್ಲಿ ಮಂಗಳವಾರ, ಗುರುವಾರ ಹಾಗೂ ಶನಿವಾರ ಮಾತ್ರ ದಿನಸಿ ಅಂಗಡಿ ತೆರೆಯಲು ಅನುಮತಿ ಇದ್ದರೂ ಸ್ಥಳೀಯ ಆಡಳಿತದ ನಿರ್ಲಕ್ಷದಿಂದ ಪ್ರತಿದಿನ ಸಂಜೆವರೆಗೂ ಕದ್ದು ಮುಚ್ಚಿ ವ್ಯವಹಾರ ನಡೆದೇ ಇತ್ತು.
ಸದ್ಯ ಅನ್‌ಲಾಕ್ ಪ್ರಕ್ರಿಯೆಯಲ್ಲಿ ಅವಶ್ಯಕ ಅಂಗಡಿ ಮುಂಗಟ್ಟು ಮಧ್ಯಾಹ್ನ ೧೨ರ ವರೆಗೆ ಹಾಗೂ ಮದ್ಯದಂಗಡಿ ಮಧ್ಯಾಹ್ನ ೨ರ ವರೆಗೆ ಮಾತ್ರ ತೆರೆಯಲು ಅನುಮತಿ ಇದ್ದು ನಂತರದಲ್ಲಿ ಎಲ್ಲವೂ ಬಂದ್ ಆಗಲಿದೆ. ಜತೆಗೆ ಶನಿವಾರ ಹಾಗೂ ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ.
ಈವರೆಗೆ ಅದೆಷ್ಟೋ ತಿಳಿ ಹೇಳಿದರೂ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಪಟ್ಟಣದಲ್ಲಿ ಬಹುತೇಕರು ತಮ್ಮ ಅಂಗಡಿ ಶಟರ್ ಎಳೆದು ಅಲ್ಲಿಯೇ ಕುಳಿತುಕೊಂಡು ಆಗಾಗ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ.
ಅಡತಿ ಅಂಗಡಿ ನೆಪದಲ್ಲಿ ಅವು ಸಹ ದಿನಸಿ ಅಂಗಡಿಗಳಾಗಿ ಪರಿವರ್ತಿತವಾಗಿದ್ದು ಕೆಲವರಿಗೆ ಇರುಸು ಮುರುಸು ತಂದಿಟ್ಟಿದೆ. ಬಟ್ಟೆ ಅಂಗಡಿಗಳು ಬಹುತೇಕ ಮನೆಗಳಿಗೆ ಶಿಪ್ಟ್ ಆದಂತೆ ತೋರುತ್ತಿದ್ದು ಜೂ.೨೧ರ ವರೆಗೆ ಅವು ಸಹ ಬಂದ್ ಇರಲಿವೆ.
ತರಕಾರಿ ಹಾಗೂ ಹಣ್ಣುಗಳನ್ನು ತಳ್ಳುಗಾಡಿಯಲ್ಲಿ ಸಂಜೆವರೆಗೆ ಮಾರಾಟ ಮಾಡಲು ಅವಕಾಶ ಇದೆ ಎಂಬ ಮಾತು ಕೇಳಿದ್ದು ಜನ ರಸ್ತೆಗಿಳಿಯಲು ಹವಣಿಸುತ್ತಿರುವಂತೆ ಕಂಡು ಬರುತ್ತಿದೆ.
ಕ್ರಮೇಣ ಚಟುವಟಿಕೆ ಆರಂಭವಾದರೂ ಜನ ಮೈಮರೆತರೆ ಕೊರೊನಾ ಮಹಾಮಾರಿ ಮತ್ತೆ ಕಾಡುವುದಂತೂ ಸತ್ಯ. ಹಾಗಾಗಿ ಮನೆಯಿಂದ ಹೊರ ಬಂದರೂ ವ್ಯವಹಾರದಲ್ಲಿ ಸಾಮಾಜಿಕ ಅಂತರ ಕಾಪಾಡುವಿಕೆ, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ ಮುಂದುವರೆಸಬೇಕಾದ ಅನಿವಾರ್ಯತೆ ಇದೆ.