ಬಾಗಲಕೋಟೆ:
ಬಾಗಲಕೋಟೆ ನೂತನ ಜಿಲ್ಲೆ ಆದಾಗಿನಿಂದ ಸುಸಜ್ಜಿತ ಮೇಲ್ದರ್ಜೆಯ ರೇಲ್ವೆ ನಿಲ್ದಾಣ ಅವಶ್ಯವಾಗಿದ್ದು, ಇಂದು ಬಾಗಲಕೋಟೆ ಹಾಗೂ ಬಾದಾಮಿ ರೇಲ್ವೆ ನಿಲ್ದಾಣಗಳು ಮೇಲ್ದರ್ಜೆಯ ಸ್ಥಾನ ಪಡೆದಿವೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ನಗರದ ರೈಲು ನಿಲ್ದಾಣದ ಆವರಣದಲ್ಲಿ ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ ಮೂಲಕ ದೇಶದ್ಯಾಂತ ಏಕಕಾಲದಲ್ಲಿ ಅಮೃತ ಭಾರತ ಸ್ಪೇಷನ್ ಯೋಜನೆಯಡಿ ೫೫೪ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ದಿ, ೧೫೦೦ ರಸ್ತೆ ಮೇಲ್ಸೇತುವೆಗಳು ಮತ್ತು ಅಂಡರ್ ಪಾಸ್‌ಗಳ ಶಂಕುಸ್ಥಾಪನೆ, ಉದ್ಘಾಟನೆಯನ್ನು ನೆರವೇರಿಸಿದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರಕಾರದ ಹಲವಾರು ಉಪಯುಕ್ತ ಯೋಜನೆಗಳಿಂದ ಭಾರತ ದೇಶ ಇಂದು ಜಾಗತಿಕ ಮನ್ನಣೆ ಪಡೆಯುತ್ತಿದೆ ಎಂದರು.
ದೇಶದ ಅಭಿವೃದ್ದಿಗಳಲ್ಲಿ ಮೂರು ಪ್ರಕಾರಗಳಿದ್ದು, ಅಭಿವೃದ್ದಿಯಾದ ದೇಶ, ಅಭಿವೃದ್ದಿ ಹೊಂದುತ್ತಿರುವ ದೇಶ, ಅಭಿವೃದ್ದಿಯಾಗದ ದೇಶ ಇವುಗಳಲ್ಲಿ ಭಾರತ ಇಂದು ಅಭಿವೃದ್ದಿಪರ ರಾಷ್ಟçವಾಗಿದೆ ಎಂದರು. ಪ್ರಧಾನ ಮಂತ್ರಿಗಳ ವಿಕಸಿತ ಭಾರತ ಎಂಬ ಕಲ್ಪಣೆಯ ಮೇರೆಗೆ ಇಂದು ಹಲವಾರು ಅಭಿವೃದ್ದಿ ಕಾರ್ಯಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿನ ೨೫ ಕೋಟಿಯಷ್ಟು ಬಡತನ ರೇಖೆಯಲ್ಲಿದ್ದ ಜನ ಇಂದು ಅಭಿವೃದ್ದಿಹೊಂದಿ ಮುಖ್ಯವಾಹಿನಿಗೆ ಬಂದಿದ್ದಾರೆ. ಇದು ದೇಶದ ಅಭಿವೃಧ್ದಿಯ ಸಂಕೇತವಾಗಿದೆ ಎಂದರು.
ಆಜಾದ ಕಾ ಅಮೃತ ಎಂಬ ವಿನೂತನ ಯೋಜನೆಯಿಂದ ೨೦೪೭ರಲ್ಲಿ ಭಾರತ ಹೇಗಿರಬೇಕೆಂಬ ಕಲ್ಪಣೆ ಪ್ರಧಾನಿಗಳದ್ದಾಗಿದೆ. ಅದರಲ್ಲಿ ರೈಲ್ವೆ ಪ್ರಮುಖವಾಗಿದ್ದು, ಜನತೆಗೆ ಹಾಗೂ ಸಾರಿಗೆ ಸಂಪರ್ಕಕ್ಕೆ ಬಹುಮುಖ್ಯ ವಾಹಿನಿಯಾಗಿದ್ದು, ಇದರಿಂದ ಸುರಕ್ಷಿತ ಹಾಗೂ ನಿಗದಿತ ಸಮಯಕ್ಕೆ ಜನರನ್ನು ತಲುಪಿಸುವ, ಸಾಮಾನ್ಯ ಜನರು ಕೂಡಾ ಐಶಾರಾಮಿ ರೈಲು ಪ್ರಯಾಣ ಮಾಡುವಂತಹ ಅವಕಾಶ ದೊರೆತಿದೆ. ಕೇವಲ ರೈಲ್ವೆಗಳ ಅಭಿವೃಧ್ದಿಯಲ್ಲದೇ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿ ಅಂಗವಿಕಲರಿಗೆ ಹಾಗೂ ವೃದ್ದರಿಗೆ ಲಿಪ್ಟ ವ್ಯವಸ್ಥೆ, ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಎಕ್ಸಿಲೇಟರ್, ಶುದ್ದ ಕುಡಿಯುವ ನೀರು, ತಂಗುದಾಣ ಹಾಗೂ ಸುಸಜ್ಜಿತ ಶೌಚಾಲಯಗಳನ್ನು ಒದಗಿಸಿಕೊಡಲಾಗಿದೆ ಎಂದರು.
ಜಿಲ್ಲೆಗೆ ಒಟ್ಟು ೧೦೩.೩೭ ಕೋಟಿ ರೂ. ಕೊಡುಗೆ ನೀಡಿದ್ದು, ಅದರಲ್ಲಿ ಅಮೃತ ಭಾರತ ಯೋಜನೆಯಡಿ ಬಾಗಲಕೋಟೆ ರೈಲು ನಿಲ್ದಾಣ ಪುನವೃದ್ದಿಗೆ ೧೬.೨೪ ಕೋಟಿ, ಬಾದಾಮಿ ರೈಲು ನಿಲ್ದಾಣ ಪುನವೃದ್ದಿಗೆ ೧೫.೨೧ ಕೋಟಿ ಹಾಗೂ ಬಾದಾಮಿ ಸ್ಟೇಷನ್ ಹತ್ತಿರ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ೩೯.೬೩ ಕೋಟಿ, ಗುಳೇದಗುಡ್ಡ ಸ್ಟೇಷನ್ ಹತ್ತಿರ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ೩೨.೨೯ ಕೋಟಿ ಕಾಮಗಾರಿಗೆ ಪ್ರಧಾನ ಮಂತ್ರಿಯವರು ಇಂದು ಚಾಲನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ ಭಾರತದಲ್ಲಿ ಏಕಕಾಲದಲ್ಲಿ ೫೫೪ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ದಿ, ೧೫೦೦ ರಸ್ತೆ ಮೇಲ್ಸೇತುವೆಗಳು ಮತ್ತು ಅಂಡರ್ ಪಾಸ್‌ಗಳಿಗೆ ಚಾಲನೆ ನೀಡಿರುವುದೊಂದು ದಾಖಲೆ ಕಾರ್ಯಕ್ರಮ. ಈ ಯೋಜನೆಯಡಿ ಬಾಗಲಕೋಟೆ, ಬದಾಮಿಯ ರೈಲು ನಿಲ್ದಾಣ ಮೇಲ್ದರ್ಜೆಯಿಂದ ಜಿಲ್ಲೆಗೆ ಶಕ್ತಿ ಬಂದಂತಾಗಿದೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಹುಬ್ಬಳ್ಳಿ ನೇತೃಯ್ಯ ರೈಲ್ವೆ ವಿಭಾಗದ ಹಿರಿಯ ಅಭಿಯಂತರ ಸ್ಪಪ್ಲಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಂಸದ ಪಿ.ಸಿ.ಗದ್ದಿಗೌಡರ ಬಹುಮಾನ ವಿತರಣೆ ಮಾಡಲಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ನಗರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಇಂಡಿಯನ್ ಆಯಿಲ್ ಕಾರ್ಪೋರೇಶನ್ ನಿರ್ದೇಶಕ ರಾಜು ರೇವಣಕರ, ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.
*ದಿ.ಸುರೇಶ ಅಂಗಡಿ, ಡಿಸಿ ಕ್ಯಾಪ್ಟನ್ ರಾಜೇಂದ್ರರನ್ನು ಸ್ಮರಿಸಿದ ಗದ್ದಿಗೌಡರ*
——————————
ಬಾದಾಮಿ ಹಾಗೂ ಗುಳೇದಗುಡ್ಡ ರೈಲ್ವೆ ಸ್ಟೇಷನ್ ಹತ್ತಿರ ರಸ್ತೆ ಮೇಲ್ಸೇತುವೆ ನಿರ್ಮಿಸಲು ಕಳೆದ ೨ ವರ್ಷಗಳಿಂದ ಮಂಜೂರಾತಿ ದೊರೆತಿದ್ದರೂ ಭೂಸ್ವಾದೀನ ಪಡಿಸಿಕೊಳ್ಳುವಲ್ಲಿ ವಿಳಂಭವಾಗಿತ್ತು. ಆದರೆ ಅಂದಿನ ರೈಲ್ವೆ ಮಂತ್ರಿ ದಿ.ಸುರೇಶ ಅಂಗಡಿ ಹಾಗೂ ಅಂದಿನ ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ.ರಾಜೇಂದ್ರ ಅವರು ಈ ಕಾರ್ಯಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದನ್ನು ಸ್ಮರಿಸಿದರು.