ಬೆಂಗಳೂರು, ಜೂನ್ 1: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು ಸಚಿವರೂ ಆಗಿದ್ದಾರೆ. ಅವರ ಕಣ್ಣಿನ ಕೆಳಗೆಯೇ ಕೋಟ್ಯಂತರ ರೂ. ಹಗರಣ ನಡೆದರೂ ಅವರಿಗೆ ತಿಳಿದಿಲ್ಲ. ಕೂಡಲೇ ಸಿಎಂ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿ, ಮೃತ ಪಿ.ಚಂದ್ರಶೇಖರನ್ ಅವರ ಕುಟುಂಬ ಕಷ್ಟದಲ್ಲಿದೆ. ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದರೂ, ತಮ್ಮ ಬಳಿಯೇ ಇರುವ ಹಣಕಾಸು ಇಲಾಖೆಯಿಂದ ಎಲ್ಲ ಮಾಹಿತಿ ಪಡೆದಿದ್ದರೂ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಮಾತ್ರ ಪಡೆಯುತ್ತಿಲ್ಲ ಎಂದರು.
ಆಂಧ್ರಪ್ರದೇಶದ ಜ್ಯುಬಿಲಿ ಹಿಲ್ಸ್ ಬ್ಯಾಂಕ್‌ಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ. ಜೊತೆಗೆ 9 ಐಟಿ ಕಂಪನಿಗಳಿಗೆ ವರ್ಗಾಯಿಸಲಾಗಿದೆ. ಈ ಹಣವನ್ನು ದಲಿತರ ಶ್ರೇಯಸ್ಸಿಗಾಗಿ ಇಡಲಾಗಿತ್ತು. ಇಂತಹ ಹಣವನ್ನೇ ಕಾಂಗ್ರೆಸ್‌ನವರು ಲೂಟಿ ಮಾಡುತ್ತಿದ್ದಾರೆ. ಇಲ್ಲಿ ಯಾರು ಮುಖ್ಯಮಂತ್ರಿ ಎಂಬುದೇ ಅರ್ಥವಾಗುತ್ತಿಲ್ಲ. ಇಲ್ಲಿ ಇಬ್ಬರು ಮುಖ್ಯಮಂತ್ರಿ ಹಾಗೂ ಸೂಪರ್ ಸಿಎಂ ಇದ್ದಾರೆ ಎಂದರು.
ಸಿದ್ದರಾಮಯ್ಯನವರ ಸರ್ಕಾರದಲ್ಲಿ ಲೂಟಿಯನ್ನು ತಡೆದವರು ನಿವೃತ್ತರಾಗಬೇಕು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕು. ಈ ಹಗರಣ ದೆಹಲಿಯನ್ನು ತಲುಪಿದ್ದು, ಮುಂದೆ ದೆಹಲಿ ನಾಯಕರ ವಿಚಾರವೂ ಬಹಿರಂಗವಾಗಲಿದೆ. ದಲಿತರಿಗೆ ಮೀಸಲಿಟ್ಟ ಹಣ ಎಲ್ಲಿಗೆ ಹೋಗಿದೆ ಎಂಬುದನ್ನು ಇನ್ನೂ ಪತ್ತೆ ಮಾಡಬೇಕಿದೆ. ಮಹಿಳೆಯರ ಅಕೌಂಟ್‌ಗೆ ಟಕಾಟಕ್ ಎಂದು ಹಣ ವರ್ಗಾವಣೆಯಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದರೆ ಇಲ್ಲಿ ಐಟಿ ಕಂಪನಿಗಳ ಖಾತೆಗೆ ಟಕಾಟಕ್ ಎಂದು ವರ್ಗಾವಣೆಯಾಗಿದೆ ಎಂದು ದೂರಿದಿದ್ದಾರೆ.
. ಸರ್ಕಾರದ ಹಣವನ್ನು ಯಾರು ಹೇಗೆ ಬೇಕಾದರೂ ವರ್ಗಾವಣೆ ಮಾಡಬಹುದು ಎಂಬುದು ಇದರ ಅರ್ಥ. ಈ ಹಣದಲ್ಲಿ ಸೋನಿಯಾ ಗಾಂಧಿ ಅವರಿಗೂ ಪಾಲು ಸಿಕ್ಕಿದೆ ಎನ್ನುವುದು ನನ್ನ ಅನುಮಾನ ಎಂದು ಹೇಳಿದ್ದಾರೆ.